ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾರ್ ರೂಂ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೂಚನೆ

Spread the love

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾರ್ ರೂಂ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೂಚನೆ

ಮಂಗಳೂರು: ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಮೇ.23ರ ಸೋಮವಾರ ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಸಭೆ ಹಾಗೂ ಜೂನ್ 1ರಂದು ಜಿಲ್ಲೆಗೆ ಮುಖ್ಯಮಂತ್ರಿಯವರ ಭೇಟಿ ಕುರಿತಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ನೀಡಿದ ನಿರ್ದೇಶನಗಳಿವು:
ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಈಗಾಗಲೇ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದಾರೆ.
ಮುಂಗಾರು ಸಂದರ್ಭದಲ್ಲಿ ಆಗಬಹುದಾದ ಅವಘಡಗಳನ್ನು ತಪ್ಪಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ದಿನದ 24 ತಾಸು ಕಾರ್ಯನಿರ್ವಹಿಸುವ ವಾರ್ ರೂಂಗಳನ್ನು ಜಿಲ್ಲೆಯ ಇಬ್ಬರು ಸಹಾಯಕ ಆಯುಕ್ತರು ತಕ್ಷಣ ಆರಂಭಿಸಬೇಕು, ಅಲ್ಲಿ ದೂರವಾಣಿ ಸಂಖ್ಯೆ, ಅಧಿಕಾರಿಗಳ ನಿಯೋಜನೆ ಹಾಗೂ ಪರಿಹಾರ ನೀಡುವ ಕೆಲಸಗಳನ್ನು ಮಾಡಬೇಕು.

ಜಿಲ್ಲೆಯನ್ನು ಪ್ರವೇಶಿಸುವ ಚಾರ್ಮಾಡಿ, ಶಿರಾಡಿ ಹಾಗೂ ಸಂಪಾಜೆ ಘಾಟಿಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡಲೇ ಭೇಟಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು, ಅಗತ್ಯವಿದ್ದಲ್ಲೀ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರು ಹಾಗೂ ಹಾಸನ ಜಿಲ್ಲಾಧಿಕಾರಿಯವರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಕಾಮಗಾರಿ ಕೈಗೊಂಡಿರುವ ಸ್ಥಳಗಳಲ್ಲಿ ವಾಹನಗಳು ಅಪಘಾತಕ್ಕೀಡಾಗದಂತೆ ಹೆಚ್ಚು ಸಂಖ್ಯೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು, ರಸ್ತೆಯಲ್ಲಿ ನಿಂತ ನೀರು ಹೋಗಲು ಅಗತ್ಯ ಕ್ರಮವಹಿಸಬೇಕು, ಸೂಚನಾ ಫಲಕಗಳು ಬಿದ್ದು ಹೋದಲ್ಲಿ ಅವುಗಳನ್ನು ಪುನಃ ಅಳವಡಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯವರು ಶಾಸಕರೊಂದಿಗೆ ಸಮಾಲೋಚಿಸಿ ರಸ್ತೆಯಲ್ಲಿ ಬಿದ್ದ ಪಾಟ್ ಹೋಲ್‍ಗಳನ್ನು ಮುಚ್ಚುವ ಕೆಲಸ ಮಾಡಬೇಕು, ಅನುದಾನ ಅಗತ್ಯವಿದ್ದರೆ ಒದಗಿಸಿಕೊಡಲಾಗುವುದು ಎಂದರು.
ಗಾಳಿ ಮಳೆಗೆ ಬೀಳುವ ಕಂಬಗಳನ್ನು ಕೂಡಲೇ ಅಳವಡಿಸಬೇಕು, ಗ್ಯಾಂಗ್‍ಮೆನ್‍ಗಳನ್ನು ಆಕ್ಟಿವ್ ಮಾಡಬೇಕು, ಟ್ರಾನ್ಸ್‍ಫಾರ್ಮರ್‍ಗಳು ಕೆಟ್ಟುಹೋದಲ್ಲಿ ಕೂಡಲೇ ಅವುಗಳನ್ನು ಬದಲಾಯಿಸಿಕೊಡಬೇಕು ಎಂದರು.

ಮಳೆಗಾಲದಲ್ಲಿ ವಿಶೇಷವಾಗಿ ಆರೋಗ್ಯ ಇಲಾಖೆ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು, ಡೆಂಗ್ಯೂ ಮತ್ತು ಮಲೇರಿಯಾ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು, ಕಳೆದ ಎರಡ್ಮೂರು ವರ್ಷಗಳಲ್ಲಿ ಮಂಗಳೂರಿನಲ್ಲಿ ಮಲೇರಿಯಾದ ಹೆಚ್ಚಿನ ಪ್ರಕರಣಗಳು ವರದಿಯಾಗಿತ್ತು, ಈ ಬಾರಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದರು.

ಜಿಲ್ಲೆಯ ಎಲ್ಲಾ ತಹಶೀಲ್ದಾರರ ಖಾತೆಯಲ್ಲಿ 50 ಲಕ್ಷ ರೂ.ಗಳ ಅನುದಾನವಿದೆ, ಜಿಲ್ಲಾಡಳಿತದಿಂದ ಬಳಿ 10 ಕೋಟಿ ಅನುದಾನವಿದ್ದು, ಇನ್ನೂ ಹೆಚ್ಚಿನ ಅನುದಾನ ಬೇಕಿದ್ದರೆ ಸರ್ಕಾರದಿಂದ ತರಲಾಗುವುದು, ಅದನ್ನು ಅಗತ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಮುಂಬರುವ ಜೂನ್ ಒಂದರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಬರಲಿದ್ದು, ಮುಂಗಾರು ಬಗ್ಗೆ ಚರ್ಚೆ ಇನ್ನೂ ವಿಸೃತ ಚರ್ಚೆ ಮಾಡಲಾಗುವುದು, ಅನುದಾನ ಅಗತ್ಯವಿದ್ದಲ್ಲೀ ಆ ಬಗ್ಗೆ ಕೋರಿಕೆ ಇರಿಸಲಾಗುವುದು.

ಪ್ರಾಕೃತಿಕ ವಿಕೋಪಗಳು ಹೇಳಿ ಕೇಳಿ ಬರುವುದಿಲ್ಲ, ಅವು ಆಕಸ್ಮಿಕ, ಅವುಗಳು ಬಂದಾಗ ಹೆಚ್ಚಿನ ಅಪಾಯವಾಗದಂತೆ ಅಲರ್ಟ್ ಆಗಿರಬೇಕು, ಈ ದಿಸೆಯಲ್ಲಿ ಹೋಂ ಗಾರ್ಡ್‍ಗಳು ಸಜ್ಜಾಗಿರಬೇಕು, ಪೋರ್ಟ್‍ನವರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ನಿರ್ವಹಿಸಬೇಕು.

ತುರ್ತು ಅನಿವಾರ್ಯ ಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು, ಯಾವುದೇ ಅಪಾಯವದಂತೆ ಈ ಬಾರಿಯ ಮಳೆಗಾಲ ಕಳೆಯಬೇಕು, ಅದಕ್ಕಾಗಿ ಬೇಕಾದ ಎಚ್ಚರಿಕೆ ಕ್ರಮವಹಿಸಲಾಗುವುದು, ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ಅವರು ಕೋರಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಡಿಸಿಪಿ ಹರಿರಾಂ ಶಂಕರ್, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.

ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್, ರಾಜೇಶ್ ನಾಯ್ಕ್, ಸಂಜೀವ್ ಮಠಂದೂರು, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಡಾ. ಮಂಜುನಾಥ್ ಭಂಡಾರಿ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.


Spread the love