ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಗುರಿ ಇದ್ದಾಗ ಮಾತ್ರ ಸಾಧ್ಯ – ಬಿಷಪ್ ಜೆರಾಲ್ಡ್ ಲೋಬೊ

Spread the love

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಗುರಿ ಇದ್ದಾಗ ಮಾತ್ರ ಸಾಧ್ಯ – ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮತ್ತು ಗುರಿ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಭಾನುವಾರ ಪಾಂಬೂರಿನ ಮಾನಸ ಪುನರ್ವಸತಿ ಕೇಂದ್ರದಲ್ಲಿ ಕಥೊಲಿಕ್ ಸಭಾ ಮತ್ತು ಜಾನ್ ಡಿ’ಸಿಲ್ವಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಹಲವಾರು ಅವಕಾಶಗಳಿವೆ ಆದರೆ ಅದನ್ನು ಪಡೆದುಕೊಳ್ಳುವತ್ತ ಕಠಿಣ ಪರಿಶ್ರಮ ಮತ್ತು ಸ್ಪರ್ಧಾತ್ಮಕ ಚಿಂತನೆ ಅಗತ್ಯವಿದೆ. ವಿದ್ಯಾರ್ಥಿಗಳು ಕೇವಲ ಬಾವಿಯೊಳಗಿನ ಕಪ್ಪೆಯಾಗದೆ ಮುಂದೆ ಯಾವ ಗುರಿ ತಲುಪಬೇಕು ಎನ್ನುವುದನ್ನು ಚಿಕ್ಕಂದಿನಲ್ಲೇ ನಿರ್ಧಾರ ಮಾಡಿದಾಗ ಮಾತ್ರ ಯಶಸ್ಸು ಲಭಿಸಲು ಸಾಧ್ಯವಿದೆ.

ಭಾರತದಲ್ಲಿ ನಮ್ಮ ಮಕ್ಕಳಿಗೆ ಹಲವಾರು ಅವಕಾಶಗಳಿದ್ದು ಅದರ ಸದುಪಯೋಗ ಪಡೆಯುವ ಕೆಲಸ ನಡೆಯಬೇಕು ಮುಂದಿನ 20 ವರ್ಷಗಳಿಗೆ ಬೇಕಾದ ಉದ್ಯೋಗಗಳು ಭಾರತದಲ್ಲೇ ಇದ್ದು ಅದಕ್ಕೆ ಬೇಕಾದ ರೀತಿಯ ಶಿಕ್ಷಣವನ್ನು ಪಡೆಯುವತ್ತ ನಮ್ಮ ಮಕ್ಕಳು ಪ್ರಯತ್ನಿಸಬೇಕು. ಮಕ್ಕಳು ತಮ್ಮನ್ನು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಾಗ ಉತ್ತಮವಾದ ಫಲಿತಾಂಶದೊಂದಿಗೆ ಒಳ್ಳೆಯ ಉದ್ಯೋಗ ಪಡೆಯಲು ಸಾಧ್ಯವಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೊಸ ಶಿಕ್ಷಣ ನೀತಿಯಂತೆ ಚಿಕ್ಕಂದಿನಲ್ಲೇ ಇದಕ್ಕೆ ಸಜ್ಜುಗೊಳ್ಳಬೇಕು ಎಂದರು.

ಮಾಜಿ ಶಾಸಕ ಜೆ ಆರ್ ಲೋಬೊ ಮಾತನಾಡಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಸರಕಾರಿ ಸೇವೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಸರಕಾರಿ ಕ್ಷೇತ್ರ ಭ್ರಷ್ಠಾಚಾರದಿಂದ ಕೂಡಿದೆ ಎಂಬ ಮಾತು ಸರಿಯಲ್ಲ ಹೇಗೆ ಒಂದು ತಾವರೆ ಹೂವು ಕೆಸರಿನಲ್ಲಿ ಇದ್ದು ಕೊಂಡು ಅರಳಿ ತನ್ನ ಸೌಂದರ್ಯವನ್ನು ಸಮಾಜಕ್ಕೆ ನೀಡುತ್ತದೆಯೋ ಅದೇ ರೀತಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಭ್ರಷ್ಠಾಚಾರದ ಕ್ಷೇತ್ರ ಎಂಬ ಹಣೆಪಟ್ಟಿಯನ್ನು ತೆಗೆದು ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಮಾದರಿಯಾಗಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಶಕ್ತರನ್ನಾಗಿಸಲು ಹೆತ್ತವರು ಪ್ರಯತ್ನಿಸುವುದರೊಂದಿಗೆ ಹೆಚ್ಚು ಸರಕಾರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವತ್ತ ಉತ್ತೇಜನ ನೀಡಬೇಕು ಎಂದರು..

ಕಾರ್ಯಕ್ರಮದಲ್ಲಿ 2021-22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು

ಜಾನ್ ಡಿಸಿಲ್ವಾ ಫೌಂಡೇಶನ್ ಇದರ ಮುಖ್ಯಸ್ಥರಾದ ಜೋನ್ ಡಿಸಿಲ್ವಾ ಮತ್ತು ಗ್ಲ್ಯಾಡಿಸ್ ಡಿಸಿಲ್ವಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷರಾದ ರೋಬರ್ಟ್ ಮಿನೇಜಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿಸೋಜಾ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜಾ, ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್, ಕಾರ್ಯದರ್ಶಿ ಕಾರ್ಯಕ್ರಮದ ಸಂಯೋಜಕ ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.


Spread the love