
ಜುಲೈನಲ್ಲಿ 10 ಕೆ.ಜಿ ಅಕ್ಕಿ ನೀಡದಿದ್ದರೆ ಹೋರಾಟ: ಬೊಮ್ಮಾಯಿ
ಬೆಂಗಳೂರು: ‘ಅಕ್ಕಿ ಸರಬರಾಜು ವಿಷಯದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡುವ ಮೂಲಕ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ದೂರಿದರು.
‘ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಮೋಸ ಮಾಡುವುದನ್ನು ಮುಂದುವರಿಸಿದೆ. ಈಗಾಗಲೇ ನೀಡಿರುವ ಭರವಸೆಯಂತೆ ಜುಲೈನಲ್ಲಿ ಜನರಿಗೆ 10 ಕೆ.ಜಿ. ಅಕ್ಕಿ ನೀಡದಿದ್ದರೆ ಜನರನ್ನು ಸಂಘಟಿಸಿ ಹೋರಾಟ ಮಾಡುತ್ತೇವೆ’ ಎಂದರು.
‘ಆಹಾರ ಭದ್ರತೆ ಕಾಯ್ದೆಯಡಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ 5 ಕೆ.ಜಿ ಅಕ್ಕಿ ನೀಡುತ್ತಿದೆ. ಜತೆಗೆ ಸಾರಿಗೆ ಮತ್ತು ಇತರ ವೆಚ್ಚಗಳನ್ನು ಸಹ ಕೇಂದ್ರ ಸರ್ಕಾರ ಭರಿಸುತ್ತಿದೆ. ಹೀಗಾಗಿ, 10 ಕೆ.ಜಿ ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಅವರು ಘೋಷಿಸಿದ್ದರೂ, ಇದರಲ್ಲಿ 5 ಕೆ.ಜಿ ಅಕ್ಕಿಯನ್ನು ಕೇಂದ್ರ ಸರ್ಕಾರವೇ ನೀಡಲಿದೆ’ ಎಂದು ತಿಳಿಸಿದರು.
‘ಅನ್ನಭಾಗ್ಯ ಯೋಜನೆ ಮುಖ್ಯಮಂತ್ರಿ ಅವರ ಅತ್ಯಂತ ಮಹತ್ವದ ಯೋಜನೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ವತಃ ಯಾಕೆ ಪತ್ರ ಬರೆಯಲಿಲ್ಲ ಅಥವಾ ಸ್ವತಃ ಕೇಂದ್ರದ ಸಚಿವರ ಜೊತೆ ಮಾತನಾಡಬಹುದಿತ್ತು. ಬೇರೆ ಟೆಂಡರ್ ಮೂಲಕವೂ ಅಕ್ಕಿ ಖರೀದಿ ಮಾಡುವ ಪರ್ಯಾಯ ಮಾರ್ಗ ಅನುಸರಿಸಬಹುದಿತ್ತು. ಅದನ್ನು ಕೈಬಿಟ್ಟು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಈಗಲಾದರೂ ಬೇರೆ ಎಜೆನ್ಸಿ ಮೂಲಕ ಖರೀದಿ ಮಾಡಿ ಜನರಿಗೆ ಅಕ್ಕಿ ನೀಡಬೇಕು. ಇಲ್ಲದಿದ್ದರೆ ಜನರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿ’ ಎಂದರು.