ಜೂನ್ 23 ಕ್ಕೆ ರೂಪೇಶ್ ಶೆಟ್ಟಿ ನಿರ್ದೇಶನದ ತುಳು ಸಿನೆಮಾ ಸರ್ಕಸ್ ತೆರೆಗೆ

Spread the love

ಜೂನ್ 23 ಕ್ಕೆ ರೂಪೇಶ್ ಶೆಟ್ಟಿ ನಿರ್ದೇಶನದ ತುಳು ಸಿನೆಮಾ ಸರ್ಕಸ್ ತೆರೆಗೆ

ತುಳು ಸಿನಿಮಾರಂಗದ ರಾಕ್ ಸ್ಟಾರ್, ಬಿಗ್ ಬಾಸ್ ಒಟಿಟಿ ಹಾಗೂ ಸೀಸನ್ ೯ರ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ “ಸರ್ಕಸ್” ತುಳು ಸಿನಿಮಾ ಬಿಡುಗಡೆಗೆ ದಿನ ನಿಗದಿಯಾಗಿದೆ.

ಜೂನ್ ೨೩ ರಂದು ಸಿನಿಮಾ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ಏಕಕಾಲದಲ್ಲಿ ವಿದೇಶದಲ್ಲೂ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದ್ದಾರೆ. ತುಳು ಸಿನಿಮಾರಂಗದಲ್ಲಿ ಅತಿ ದೊಡ್ಡ ಹಿಟ್ ಚಿತ್ರ “ಗಿರಿಗಿಟ್” ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ.

ರೂಪೇಶ್ ಶೆಟ್ಟಿ ಕನ್ನಡದಲ್ಲಿ ‘ಗೋವಿಂದಾ ಗೋವಿಂದಾ’ ಸಹಿತ ಐದು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರೂಪೇಶ್ ಶೆಟ್ಟಿ ತಂಡ ಸರ್ಕಸ್ ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆಗಾಗಿ ಜೂನ್ ತಿಂಗಳಿನಲ್ಲಿ ದಿನ ನಿಗದಿಗೊಳಿಸಿದ್ದಾರೆ.

ಪ್ರತೀ ಚಿತ್ರದಲ್ಲೂ ಹೊಸತನ ಬಯಸುವ ರೂಪೇಶ್ ಶೆಟ್ಟಿ ಈ ಬಾರಿ ಕೂಡಾ ಒಂದು ಉತ್ತಮ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಗಿರಿಗಿಟ್, ಗಮ್ಜಾಲ್ ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ.

ರೂಪೇಶ್ ಶೆಟ್ಟಿ ಅವರು ತನ್ನದೇ ಆದ ಒಂದು ತಂಡವನ್ನು ಕಟ್ಟಿ ಕೊಂಡಿದ್ದಾರೆ. ಹೀಗಾಗಿ ಅವರ ಕೆಲಸ ಕಾರ್ಯಗಳು ಅವರು ಎಣಿಸಿದಂತೆ ಬಹು ಸುಲಭ ಆಗಿದೆ. ರೂಪೇಶ್ ಶೆಟ್ಟಿ ತುಳು ಸಿನಿಮಾರಂಗಕ್ಕೆ ಹೊಸ ಖಳನಟನನ್ನು ಪರಿಚಯಿಸುತ್ತಿದ್ದಾರೆ. ಸಲಗ ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳುವಿಗೆ ಪರಿಚಯ ಆಗುತ್ತಿದ್ದಾರೆ.

ಅದೇ ರೀತಿ ರಚನಾ ರೈ ಎಂಬ ನಟಿಯನ್ನು ರೂಪೇಶ್ ತುಳು ಸಿನಿಮಾ ರಂಗಕ್ಕೆ ಪರಿಚಯಿಸುತ್ತಿದ್ದಾರೆ. ‘ಗಿರಿಗಿಟ್’ ತುಳು ಚಿತ್ರಗಳ ಪೈಕಿ ಅತ್ಯಂತ ಯಶಸ್ವಿಯಾದ ಹಾಸ್ಯಮಯ ಚಿತ್ರ. ಹಲವು ದೇಶಗಳಲ್ಲಿ ಗಿರಿಗಿಟ್ ಬಿಡುಗಡೆ ಗೊಂಡು ಭರ್ಜರಿ ಪ್ರದರ್ಶನ ಕಂಡಿದೆ. ಈಗ ಅದೇ ತಂಡ ‘ಸರ್ಕಸ್’ ಸಿನಿಮಾ ಮಾಡಿದೆ.

ತುಳು ಚಿತ್ರಗಳ ಸಾಮಾನ್ಯ ಪ್ರಕಾರವೇ ಹಾಸ್ಯ. ‘ಸರ್ಕಸ್’ ನಲ್ಲೂ ಅದೇ ಪ್ರಧಾನ ವಸ್ತು. ರೂಪೇಶ್ ಶೆಟ್ಟಿ ನಿರ್ದೇಶಿಸಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಇಲ್ಲಿ ರಾಕೇಶ್ ಕದ್ರಿ ಕ್ರಿಯೆಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ.

ಉಳಿದಂತೆ ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್, ತಾರಾಗಣದಲ್ಲಿದ್ದಾರೆ.

ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕರಾವಳಿಯಾದ್ಯಂತ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ.

ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ, ರಾಹುಲ್ ವಶಿಷ್ಠ ಸಂಕಲನ, ಲೋಯ್ ಅವರ ಸಂಗೀತ ಈ ಚಿತ್ರಕ್ಕಿದೆ. ಗಿರಿಗಿಟ್ ಬಳಿಕ ರೂಪೇಶ್ ಶೆಟ್ಟಿ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಸರ್ಕಸ್ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಇನ್ನೂ ಹೆಚ್ಚಾಗಿದೆ.


Spread the love

Leave a Reply

Please enter your comment!
Please enter your name here