ಜೆಡಿಎಸ್‌ಗೆ ಮತ ನೀಡಿದರೆ ವ್ಯರ್ಥ:ಡಿ.ಕೆ.ಶಿವಕುಮಾರ್

Spread the love

ಜೆಡಿಎಸ್‌ಗೆ ಮತ ನೀಡಿದರೆ ವ್ಯರ್ಥ:ಡಿ.ಕೆ.ಶಿವಕುಮಾರ್

ಕೆ.ಆರ್.ನಗರ: ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಜೆಡಿಎಸ್‌ಗೆ ಮತ ನೀಡಿದರೆ ನಿಮ್ಮ ಮತ ವ್ಯರ್ಥವಾಗಲಿದೆ ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಉತ್ತಮ ಆಡಳಿತ ನೀಡಲು ಅವಕಾಶ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸಾಲಿಗ್ರಾಮ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆ.ಆರ್.ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಡಿ.ರವಿಶಂಕರ್ ಅವರಿಗೆ ಮತ ನೀಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣ ಕರ್ತರಾಗಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಡಿ.ರವಿಶಂಕರ್ ನೆಪಮಾತ್ರದ ಅಭ್ಯರ್ಥಿಯಾಗಲಿದ್ದು ನಾನೇ ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ನಾನು ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ ಡಿಕೆಶಿ ಕಾಂಗ್ರೆಸ್ ಪಕ್ಷದ ಬೆಂಬಲಿದಿಂದ ಹೆಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿ, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಆದ್ದರಿಂದ ಒಕ್ಕಲಿಗ ಸಮಾಜದವನಾದ ನನಗೂ ಒಂದು ಅವಕಾಶ ನೀಡಬೇಕು ಎಂದರು.

ಐಶ್ವರ್ಯ ಮಹದೇವ್ ಈ ಕ್ಷೇತ್ರದಿಂದ ಟಿಕೇಟ್‌ಗಾಗಿ ಅರ್ಜಿಹಾಕಿದ್ದರು ಪಕ್ಷದ ಅಧಿಕಾರಕ್ಕೆ ಬಂದ ನಂತರ ದೊಡ್ಡ ಮಟ್ಟದ ಹುದ್ದೆ ನೀಡಲಾಗುತ್ತದೆ ಎಂದು ಭರವಸೆ ನೀಡುವುದರ ಜತೆಗೆ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ಹೇಳಿರುವುದರಿಂದ ಡಿ.ರವಿಶಂಕರ್ ಅಭ್ಯರ್ಥಿಯಾಗಲಿದಾರೆ ಎಂದು ಸ್ಪಷ್ಟಪಡಿಸಿದ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಇವರ ಗೆಲುವಿಗೆ ದುಡಿಯ ಬೇಕು ಎಂದು ಸಲಹೆ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಸೇರಿದಂತೆ ಇತರ ರಾಜ್ಯ ಮುಖಂಡರ ಸಲಹೆ ಮತ್ತು ಸೂಚನೆ ಪಡೆದು ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ, 200 ಯುನಿಟ್ ಉಚಿತ ವಿದ್ಯುತ್ ಮತ್ತು ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ನೀಡಲು ನಿರ್ದರಿಸಲಾಗಿದೆ ಎಂದು ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್ ರೈತರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಮಾತನಾಡಿ 17 ವರ್ಷಗಳ ಹಿಂದೆ ಸಾಲಿಗ್ರಾಮ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದಾಗ ನನ್ನ ಪರ ಡಿಕೆಶಿ ಅವರು ಪ್ರಚಾರ ಮಾಡಿ ಗೆಲುವಿಗೆ ಕಾರಣಕರ್ತರಾಗಿದ್ದರು. ಸಾಲಿಗ್ರಾಮದಿಂದ ರಾಜಕೀಯ ಅಧಿಕಾರ ಪಡೆದ ಕಾರಣಕ್ಕಾಗಿ ಇಲ್ಲಿ ಸಭೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಅ.31ರಿಂದ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನತೆಗೆ ನೀಡಿದ ಸವಲತ್ತುಗಳ ಬಗ್ಗೆ ಹಾಗೂ ಮುಂದೆ ಅಧಿಕಾರಕ್ಕೆ ಬಂದ ನಂತರ ನೀಡುವ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದು ಜನತೆ ಉತ್ತಮ ಸ್ಪಂದನೆ ನೀಡಿದ್ದಾರೆ, ಕಳೆದ ಬಾರಿ 1729ಮತಗಳಿಂದ ಪರಾಭಗೊಂಡಿರುವ ನಾನು ಈ ಬಾರಿ ಎಲ್ಲರ ಆಶೀರ್ವಾದದಿಂದ ಜಯಗಳಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವೆ ರಾಣಿಸತೀಶ್, ಎಐಸಿಸಿ ವಕ್ತಾರೆ ಐಶ್ವರ್ಯಮಹದೇವ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿದರು. ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಮಾಜಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಹೆಚ್.ಎಂ.ರೇವಣ್ಣ, ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಕ್ಷೇತ್ರದ ಉಸ್ತುವಾರಿ ರೋಜಿಜಾನ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮೊದಲಾದವರಿದ್ದರು.


Spread the love