ಜೆಡಿಎಸ್ ಮುಖಂಡನಿಂದ ಭರ್ಜರಿ ಭೋಜನ

Spread the love

ಜೆಡಿಎಸ್ ಮುಖಂಡನಿಂದ ಭರ್ಜರಿ ಭೋಜನ

ಸರಗೂರು: ಟಿಕೆಟ್ ಆಕಾಂಕ್ಷಿಗಳು ಜನಶಕ್ತಿ ಪ್ರದರ್ಶಿಸುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿದ್ದು, ಅದರಂತೆ ಹೆಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕೆ.ಎಂ. ಕೃಷ್ಣ ನಾಯಕ್ ರವರು ತಮ್ಮ ತೋಟದ ಮನೆಯಲ್ಲಿ ಜನರನ್ನು ಸೇರಿಸಿ ಊಟ ಹಾಕಿರುವುದು ಗಮನಸೆಳೆದಿದೆ.

ಮಾದಾಪುರ ಹಾಗೂ ಹೈರಿಗೆ ಗ್ರಾಮದ ಮಧ್ಯದಲ್ಲಿರುವ ತಮ್ಮ ತೋಟದ ಮನೆಯ ಹೊರಾಂಗಣದಲ್ಲಿ ಬೃಹತ್ ಶಾಮಿಯಾನ ಹಾಕಿಸಿ ಶ್ರೀ ಚಿಕ್ಕದೇವಮ್ಮನವರ ಪೂಜಾ ಕಾರ್ಯಕ್ರಮವನ್ನು ಶ್ರೀ ಚಿಕ್ಕದೇವಮ್ಮನ ಬೆಟ್ಟದ ಅರ್ಚಕರುಗಳಿಂದ ಸುಗಮವಾಗಿ ಪೂಜಾ ಕೈಂಕರ್ಯಗಳು ನೆರವೇರಿಸಿ ಬಳಿಕ ನೆರೆದ ಜನರಿಗೆ ಭೋಜನದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮಕ್ಕೆ ಎಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ವಿವಿಧ ಗ್ರಾಮಗಳಿಂದ ಪುರುಷ, ಮಹಿಳೆಯರನ್ನದೆ ಜೆಡಿಎಸ್ ಕಾರ್ಯಕರ್ತರುಗಳು, ಅಭಿಮಾನಿಗಳು, ಸಾರ್ವಜನಿಕರು ಆಗಮಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಕೃಷ್ಣ ಕೆ ಎಂ ನಾಯಕ ಮಾತನಾಡಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚ ರತ್ನ ರಥಯಾತ್ರೆ ಯಶಸ್ವಿಯಾಗಬೇಕು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಬಂದು, ಅಧಿಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿ ತಾಲೂಕಿನ ಶ್ರೀ ಚಿಕ್ಕದೇವಮ್ಮನವರ ಬೆಟ್ಟದಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.

ಇದೇ ವೇಳೆ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಚಿಕ್ಕದೇವಮ್ಮನವರ ಪ್ರಸಾದವಾದ ಸಸ್ಯಹಾರಿ ಹಾಗೂ ಮಾಂಸಾಹಾರಿ ಭೋಜನ ಸೇವಿಸಿದರು.ಈ ಸಭೆಗೆ ಆಗಮಿಸಿದವರಿಗೆ ವಾಹನ ನಿಲ್ಲಿಸಲು ಅನುಕೂಲವಾಗುವಂತೆ ಮೈಸೂರು ಮಾನಂದವಾಡಿ ರಸ್ತೆಯ ಹೆದ್ದಾರಿಯಲ್ಲಿ ಕಾರು, ಬಸ್ಸು, ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ರಸ್ತೆ ಬದಿಯಲ್ಲೆಲ್ಲ ಸುಮಾರು ಮೂರು ನಾಲ್ಕು ಕಿಲೋಮೀಟರ್ ತನಕ ವಾಹನಗಳು ನಿಂತಿದ್ದವು. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ನಾಯಕರು ಪೂಜೆ, ಜಾತ್ರೆಗಳ ಹೆಸರಿನಲ್ಲಿ ಜನರನ್ನು ಸೇರಿಸಿ ಊಟ ಬಡಿಸುವುದು, ಉಡುಗೊರೆ ನೀಡುವುದು ಮಾಮೂಲಿಯಾಗಿದೆ.


Spread the love