ಜ.1 ರಿಂದ ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಸಹಿತ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ – ಡಿಸಿ ಜಗದೀಶ್

Spread the love

ಜ.1 ರಿಂದ ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಸಹಿತ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ – ಡಿಸಿ ಜಗದೀಶ್

ಉಡುಪಿ: ಜ.1 ರಿಂದ ಜಿಲ್ಲೆಯ ಎಲ್ಲಾ ಟೋಲ್ ಗಳಲ್ಲಿ ಸರಕಾರಿ, ಖಾಸಗಿ ಸಹಿತ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಇದನ್ನು ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನಲ್ಲಿ ಪಾಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಆದೇಶ ನೀಡಿದ್ದು ರಾಜ್ಯ ಸರಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶ ಕಟ್ಟುನಿಟ್ಟಿನಲ್ಲಿ ಪಾಲಿಸುವಂತೆ ಸೂಚನೆ ನೀಡಿದೆ ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಟೋಲ್ ಗಳಲ್ಲಿ ಸರಕಾರಿ, ಖಾಸಗಿ ಸಹಿತ ಎಲ್ಲಾ ವಾಹನಗಳು ಫಾಸ್ಟ್ಯಾಗ್ ವ್ಯಾಪ್ತಿಗೆ ಬರಲಿವೆ ಎಂದರು.

ರಾ ಹೆದ್ದಾರಿ ಪ್ರಾಧಿಕಾರದ ಪಟ್ಟಿಯಲ್ಲಿ ವಿನಾಯಿತಿ ಹೊಂದಿರುವ ವಾಹನಗಳು ಹೊರತು ಪಡಿಸಿ ಇತರ ಎಲ್ಲಾ ವಾಹನಗಳು ಫಾಸ್ಟ್ಯಾಗ್ ಹೊಂದುವುದು ಕಡ್ಡಾಯವಾಗಿದೆ. ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಟೋಲ್ ಪ್ಲಾಜಾಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ನೀಡುವಂತೆ ಜಿಲ್ಲಾ ಎಸ್ಪಿಯವರಿಗೆ ಕೂಡ ಸೂಚನೆ ನೀಡಿದ್ದೇನೆ. ಜನವರಿ 1ರಿಂದ ಸಾರ್ವಜನಿಕರು ಕಡ್ಡಾಯವಾಗಿ ತಮ್ಮ ವಾಹನಗಳಲ್ಲಿ ಫಾಸ್ಟ್ಯಾಗ್ ಹಾಕಿಕೊಂಡೆ ಪ್ರಯಾಣಿಸಲು ಜಿಲ್ಲಾಧಿಕಾರಿಯ ನೆಲೆಯಲ್ಲಿ ವಿನಂತಿ ಮಾಡುತ್ತೇನೆ. ಈಗಾಗಲೇ ಹಲವಾರು ಕಡೆ ಫಾಸ್ಟ್ಯಾಗ್ ಸಿಗುತ್ತಿದ್ದು ಅದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.

ಇದಾಗಲೇ ಎಲ್ಲರೂ ಫಾಸ್ಟ್ಯಾಗ್ ಅಳವಡಿಸಲು ಗರಿಷ್ಠ ಸಮಯ ನೀಡಲಾಗಿದ್ದು, ಇನ್ನು ಕೇಂದ್ರ ಸರಕಾದ ಹೆದ್ದಾರಿ ಪ್ರಾಧಿಕಾರ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ವಾಹನಗಳಲ್ಲಿ ಅಳವಡಿಸಲು ಸೂಚಿಸಿದೆ. ಆದರೆ ಇನ್ನೂ ಕೆಲವರು ಫಾಸ್ಟ್ಯಾಗ್ ಹಾಕಿಕೊಂಡಿಲ್ಲ ಅಂತಹವರು ಬೇಗನೆ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ಅಂತಹವರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ.

ಸ್ಥಳೀಯರಿಗೆ ಈ ವರೆಗೆ ನೀಡುತ್ತಿದ್ದ ರಿಯಾಯತಿ ಮುಂದುವರೆಯುತ್ತಿದ್ದು ಅಂತಹವರಿಗೆ ಪ್ರತ್ಯೇಕ ರಿಯಾಯತಿ ಪಾಸ್ ಫಾಸ್ಟ್ಯಾಗ್ ಇದ್ದು, 280 ರೂಪಾಯಿಗಳನ್ನು ಮಾಸಿಕವಾಗಿ ಪಾವತಿಸಿ ಅಂತಹವರು ಪ್ರಯಾಣಿಸಲು ಅವಕಾಶವಿದೆ ಎಂದರು.


Spread the love