ಜ. 12: ಕೂರ್ಮಾ ಬಳಗದ ವತಿಯಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಸಾಹಿತ್ಯಗಳ ಕುರಿತಾಗಿ ವಿಚಾರಗೋಷ್ಠಿ

Spread the love

ಜ. 12: ಕೂರ್ಮಾ ಬಳಗದ ವತಿಯಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಸಾಹಿತ್ಯಗಳ ಕುರಿತಾಗಿ ವಿಚಾರಗೋಷ್ಠಿ

ಉಡುಪಿ: ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಪ್ರಯುಕ್ತ ಕೂರ್ಮಾ ಬಳಗದ ವತಿಯಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಸಾಹಿತ್ಯಗಳ ಕುರಿತಾಗಿ ವಿಚಾರಗೋಷ್ಠಿ ಜನವರಿ 12 ರಂದು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಸಂಚಾಲಕರಾದ ಶ್ರೀಕಾಂತ್‌ ಶೆಟ್ಟಿ ಹೇಳಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ವಿಚಾರಧಾರೆಗೆ ಪೂರಕವಾದ ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕುರ್ಮಾ ಬಳಗ ವಿಚಾರಗೋಷ್ಠಿಗಳನ್ನು ಆಯೋಜಿಸುತ್ತಾ ಬಂದಿರುತ್ತದೆ. Cultural unity recreation and motivational affiliates ಎನ್ನುವುದು ಈ ಹೆಸರಿನ ಹೂರಣವಾಗಿದೆ.

ಸಾಂಸ್ಕೃತಿಕ ವಿಭಿನ್ನತೆಯಿಂದ ವಿಶ್ವದ ಗಮನ ಸೆಳೆದಿರುವ ಭಾರತ, ಸ್ವಾತಂತ್ರ್ಯ ಪಡೆದ ಬಳಿಕ ನಮ್ಮ ನವ ನಾಯಕರ ಪ್ರಮಾದಗಳಿಂದಾಗಿ ಪಾಶ್ಚಾತ್ಯ ನೀತಿಗಳನ್ನೇ ಎರವಲು ಪಡೆದುಕೊಂಡು, ವಸಾಹತುಶಾಹಿಗಳು ಹಾಕಿದ ಅಡಿಗಲ್ಲಿನ ಮೇಲೆ ಕೃತಕವಾಗಿ ಕಟ್ಟಲ್ಪಟ್ಟಿದೆ. ಈ ದೇಶದ ನಿಜವಾದ ಅಂತಸತ್ವವಾಗಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಮರು ಸ್ಥಾಪಿಸಿದರೆ ದೇಶ ಈಗ ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಪರಿಹಾರ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಶ್ರೀ ಅರವಿಂದೋ ವಿವೇಕಾನಂದ ಮತ್ತು ಸಾವರ್ಕರ್ ಅವರು ಪ್ರತಿಪಾದಿಸಿದ ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಚಿಂತನ ಮಂಥನ ನಡೆಯಬೇಕಿದೆ.

ದಿನಾಂಕ 12 ಜನವರಿ ಬುಧವಾರದಂದು ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಉಡುಪಿಯಲ್ಲಿ ನಮ್ಮ ಸಂಸ್ಥೆಯು ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಸಾಹಿತ್ಯಗಳ ಕುರಿತಾಗಿ ವಿಚಾರಗೋಷ್ಠಿ ಆಯೋಜಿಸಿದ್ದು, ಈ ಕಾರ್ಯಕ್ರಮವು ದಿನಾಂಕ 12 ಜನವರಿ 2022 3:00 ಗಂಟೆಗೆ ಸರಿಯಾಗಿ ಉಡುಪಿಯ ಪುರಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರ ಸಾವರ್ಕರ್ ಅವರ ಮೊಮ್ಮಗ, ಮೃತ್ಯುಂಜಯ ಪ್ರಕಾಶನ ಇದರ ಮುಖ್ಯಸ್ಥರಾಗಿರುವ ಸಾತ್ಯಕಿ ಸಾವರ್ಕರ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಖ್ಯಾತ ಸಾಹಿತ್ಯ ವಿಮರ್ಶಕರಾಗಿರುವ ಸಂದೀಪ್ ಬಾಲಕೃಷ್ಣನ್ ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವರ್ಕರ್ ಅವರ ಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಜೊತೆಗೆ ಸಾವರ್ಕರವರ ಸಾಹಿತ್ಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂವೇದನಾ ಫೌಂಡೇಶನ್‌ ಉಡುಪಿ ಇದರ ಪ್ರಕಾಶ್‌ ಮಲ್ಪೆ, ಸೂರಜ್‌ ಕಿದಿಯೂರು ಶಶಿಕಾಂತ್‌ ಶೆಟ್ಟಿ ಉಪಸ್ಥೀತರಿದ್ದರು.


Spread the love