
ಜ.15- 16: ಉಡುಪಿಯಲ್ಲಿ ನವೀಕೃತ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಲೋಕಾರ್ಪಣೆ
ಉಡುಪಿ: ಅವಧೂತ ಪರಂಪರೆಯ ಪ್ರಮುಖ ಕೇಂದ್ರವಾಗಿ ಉಡುಪಿ ನಗರದಲ್ಲಿ ನಿರಂತರ ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಶ್ರೀ ನಿತ್ಯಾನಂದ ಮಂದಿರ ಮಠ ಇದರ ಜೀರ್ಣೋದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠೆ ಅತ್ಯಂತ ಸಂಭ್ರಮದಿಂದ ನಡೆಯಲಿದೆ ಎಂದು ಮಂದಿರದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಕೊಡವೂರು ಹೇಳಿದರು.
ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 61 ವರ್ಷದ ಸುಧೀರ್ಘ ಹಿನ್ನೆಲೆ ಇರುವ ಈ ಮಂದಿರವು ಸಾದ್ವಿ ಸೀತಾ ಶೆಟ್ಟಿ ಅವರ ಮುಂದಾಳುತ್ವದಲ್ಲಿ ನಿರ್ಮಾಣವಾಗಿತ್ತು. ಭಗವಾನ್ ನಿತ್ಯಾನಂದ ಸ್ವಾಮಿಗಳು ಮಹಾ ಸಮಾಧಿ ಪಡೆಯುವ ಮುನ್ನವೇ ಸ್ಥಾಪನೆಯಾಗಿದ್ದ ಈ ಮಂದಿರವು ತನ್ನ ವಿಶೇಷ ಸಾನಿಧ್ಯ ಶಕ್ತಿಯಿಂದ ಸಾವಿರಾರು ಭಕ್ತರ ಪಾಲಿಗೆ ಕಲ್ಪತರುವಾಗಿದೆ.
ನಿರಂತರ ಭಜನೆ, ಸತ್ಸಂಗ, ನಿತ್ಯ ಪೂಜೆ, ಮಕ್ಕಳಿಗಾಗಿ ಬಾಲ ಭೋಜನ, ಸಾಧುಸಂತರಿಗೆ ಆಶ್ರಯ ದಾನಗಳಿಂದಾಗಿ ನಗರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿದ್ದ ಈ ಮಂದಿರ, ಸಾಕಷ್ಟು ಶಿಥಿಲಾವಸ್ತೆಗೆ ತೆರಳಿದ್ದ ಕಾರಣ ಜೀರ್ಣೋದ್ಧಾರ ಅನಿವಾರ್ಯವಾಯಿತು.
ಆದರೆ ಸದ್ಗುರುಗಳ ಇಚ್ಛೆಯೊ ಏನೋ ಎಂಬಂತೆ ಕಳೆದ ವರ್ಷದ ವರೆಗೂ ಜೀರ್ಣೋದ್ಧಾರಕ್ಕೆ ಮುಂದಡಿ ಇಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಭಗವಾನ್ ನಿತ್ಯಾನಂದರು ಮುಂಬೈ ಮೂಲದ ಖ್ಯಾತ ಉದ್ಯಮಿ ಕೆ. ಕೆ ಆವರ್ಸೆಕರ್ ಎಂಬವರಿಗೆ ವಿಶೇಷ ಪ್ರೇರಣೆ ನೀಡಿ ಉಡುಪಿಯ ಮಂದಿರ ಜೀರ್ಣೋದ್ಧಾರಕ್ಕೆ ಸಹಕರಿಸುವಂತೆ ಮಾಡಿದ್ದಾರೆ.
ಶ್ರೀ ಗುರುಗಳ ತಪೋ ಕ್ಷೇತ್ರ ವಾಗಿರುವ ಕೇರಳದ ಕಾಂಜನ ಗಾಡಿನಲ್ಲಿರುವ ಗುರುವನದ ಬೇಟಿಗೆ ಬಂದಿದ್ದ ಅವರ್ಸೆಕರ್ ಅವರು ಅಲ್ಲಿನ ಮುಖ್ಯಸ್ಥರಾಗಿರುವ ಕೊಡವೂರು ದಿವಾಕರ್ ಶೆಟ್ಟಿ ಅವರ ಸಂಪರ್ಕದಿಂದ ಉಡುಪಿಗೆ ಆಗಮಿಸಿ ದಿವಾಕರ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಈ ಮಂದಿರ ನಿರ್ಮಾಣಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದ್ದಾರೆ.
ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಈ ಮಂದಿರ ನಿರ್ಮಾಣಗೊಳ್ಳುತ್ತಿದ್ದು ಇದರ ವಾಸ್ತು ಶೈಲಿ ಗಣೇಶ ಪುರಿಯಲ್ಲಿರುವ ನಿತ್ಯಾನಂದ ಮಂದಿರದ ಮಾದರಿಯಲ್ಲೇ ಇದೆ. ಇಲ್ಲಿ ಸ್ಥಾಪಿಸಲಾಗುವ ವಿಗ್ರಹ ಕೂಡ ಗಣೇಶಪುರಿಯ ವಿಗ್ರಹದ ಪ್ರತಿರೂಪವಾಗಿದೆ.
ದಿನಾಂಕ 15ನೇ ತಾರೀಖಿನಂದು ಗಣೇಶ ಪುರಿಯಿಂದ ಆಗಮಿಸಿರುವ ಶ್ರೀದೇವರ ವಿಗ್ರಹವನ್ನು ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಜೋಡುಕಟ್ಟೆಯವರಿಗೆ ವಾಹನ ಜಾತದ ಮೂಲಕ ತರಲಾಗುವುದು. ಬಳಿಕ ಭವ್ಯ ಶೋಭಾ ಯಾತ್ರೆಯಲ್ಲಿ ಈ ವಿಗ್ರಹವನ್ನು ಮಂದಿರಕ್ಕೆ ತಂದು ವೇದಮೂರ್ತಿ ಹಯಗ್ರೀವ ತಂತ್ರಿ ಅವರ ಮಾರ್ಗದರ್ಶನದಲ್ಲಿ ಪ್ರತಿಷ್ಠಾಪಿಸಲಾಗುವುದು.
ಶೋಭಾಯಾತ್ರೆಯಲ್ಲಿ ಕೇರಳದಿಂದ ಆಹ್ವಾನಿಸಲಾದ ವಿಶೇಷ ಪಂಚ ವಾದ್ಯ ಬಳಗ ನೂರಾರು ಭಜನಾ ತಂಡಗಳು ಮತ್ತು ಪಾರಂಪರಿಕ ಕಲಾತಂಡಗಳು ಭಾಗವಹಿಸಲಿವೆ.
ದಿನಾಂಕ 16ನೇ ತಾರೀಖಿನಂದು ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ಮಂದಿರಲೋಕಾರ್ಪಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮಹಾ ಅನ್ನಸಂತರ್ಪಣೆ ಜರಗಲಿರುವುದು.
ಇದೇ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳು,ಸಂತಸಮಾಗಮ, ರಾಷ್ಟ್ರೀಯ ಮಟ್ಟದ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಭಜನಾ ಕಾರ್ಯಕ್ರಮಗಳು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶ್ರೀ ನಿತ್ಯಾನಂದ ಗುರು ವಿದ್ಯಾ ಕೇಂದ್ರ ಕಾಂಜನಗಾಡ್ ವಿಶ್ವಸ್ಥರಾದ ಮೋಹನ್ ಚಂದ್ರ ನಂಬಿಯಾರ್, ಗೌರವಾಧ್ಯಕ್ಷರಾದ ಎ.ಪಿ ಗಿರೀಶ್, ಎಂ ಎಂ ಪಡಿಯಾರ್, ಡಾ. ರಘುವೀರ್ ಪೈ, ಗೋವಾ ಸಂಚಾಲಕರಾದ ಶಶಿಕುಮಾರ್ ಶೆಟ್ಟಿ, ಸಂಚಾಲಕರಾದ ಮಹಾಬಲ ಕುಂದರ್, ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.