ಜ- 16-23: ಉಡುಪಿ ಕ್ರಷ್ಣ ಮಠದ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ವೈ

Spread the love

ಜ- 16-23: ಉಡುಪಿ ಕ್ರಷ್ಣ ಮಠದ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ವೈ

ಉಡುಪಿ: ಶ್ರೀ ವಾದಿರಾಜ ಶ್ರೀಪಾದರಿಂದ ಪ್ರಾರಂಭಿಸಲ್ಪಟ್ಟ ದ್ವೈವಾರ್ಷಿಕ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯಕ್ರಮವು ಜನವರಿ 16ರಿಂದ 23 ರವರೆಗೆ ನಡೆಯಲಿದ್ದು, ನಾಡಿನ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಧಾರ್ಮಿಕ ಸಭೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ವಿಭಿನ್ನ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿಂದ್ ರಾಜ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ ವಿದ್ವಾಂಸರಿಂದ ಪ್ರತಿದಿನ ಉಪನ್ಯಾಸಗೋಷ್ಠಿಗಳು, ವಿಶೇಷವಾಗಿ ಅಷ್ಟಮಠಗಳ ಕುರಿತು, ಪ್ರತಿ ಮಠಗಳ ಪರ್ಯಾಯಾವಧಿಯಲ್ಲಿ ನಡೆದ ಸಾಧನೆಗಳನ್ನು ನೆನಪಿಸುವ ಉಪನ್ಯಾಸಗಳು ನಡೆಯಲಿವೆ.

ಭಕ್ತಾದಿಗಳಿಗೆ ಶ್ರೀಕೃಷ್ಣ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಿದ “ವಿಶ್ವಪಥ”ದಲ್ಲಿ ಸಾಗಿದರೆ ಕಟ್ಟಿಗೆ ರಥ, ಮಧ್ವ ಸರೋವರ, ಶ್ರೀಕೃಷ್ಣ ದೇವರ ಗರ್ಭಗುಡಿಯ ಸುವರ್ಣ ಗೋಪುರವನ್ನು ವೀಕ್ಷಿಸಿ ದೇವರ ದರ್ಶನ ಮಾಡಿ ಭೋಜನಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಹೊರಹೋಗುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶ್ವಪಥವನ್ನು ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಜನವರಿ 18ರಂದು ಉದ್ಘಾಟಿಸಲಿದ್ದಾರೆ ಎಂದರು.

“ದಿನಕ್ಕೊಂದು ಭಾಗವತಾಮೃತ ಬಿಂದುಗಳು” – ಶ್ರೀ ಅದಮಾರು ಮಠದ ಆನಂದ ಪ್ರಕಾಶನದಿಂದ ಪ್ರಕಟಣೆಗೊಳ್ಳಲಿರುವ ಪಲಿಮಾರು ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥರ ಭಾಗವತ ಪ್ರವಚನಗಳ ಸಂಗ್ರಹ ಕೃತಿಯು ಜನವರಿ 16ರಂದು ಅನಾವರಣಗೊಳ್ಳಲಿದೆ.

ಪರ್ಯಾಯ ಶ್ರೀಗಳ ಆಶಯದಂತೆ ಗ್ರಾಮೀಣ ಭಾಗದ ಶ್ರಮಿಕ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ 8 ದಿನಗಳ ಕಾಲ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ, ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ. ಪಶ್ಚಿಮ ಬಂಗಾಲ, ಒರಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದ ಮಧುಬನಿ ಕಲಾಪ್ರಕಾರಗಳು, ಮಿಥಿಲಾ ಚಿತ್ರ, ಮಂಜುಷಾ ಚಿತ್ರ, ಗೋದ್ನ ಚಿತ್ರ, ಕಾಲಿಘಟ್ ಪೈಂಟಿಂಗ್, ಪಟಚಿತ್ರ, ಲೋಹಶಿಲ್ಪ, ಎರಕಶಿಲ್ಪ, ಗೋಂಡು ಕಲಾಕೃತಿ, ಮಣ್ಣಿನ, ಹುಲ್ಲಿನ ಕಲಾಕೃತಿಗಳು ಹಾಗೆಯೇ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಬಿಜಾಪುರ, ಧಾರವಾಡ, ಶಿರಸಿ, ಕುಂದಾಪುರ, ಬೆಂಗಳೂರು, ಉಡುಪಿ ಭಾಗದ ಗ್ರಾಮೀಣ ಉತ್ಪನ್ನಗಳಾದ ಸೀರೆ, ಮಣ್ಣಿನ, ಹುಲ್ಲಿನ, ಮರದ ಕಲಾಕೃತಿಗಳು, ಸಾವಯವ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ವಿವಿಧ ಕಲಾ ಪ್ರಕಾರಗಳಾದ ಮಣ್ಣಿನ ಕಲಾಕೃತಿ ರಚನೆ, ಬುಟ್ಟಿ ರಚನೆ, ಸಹಜ ಬಣ್ಣದಲ್ಲಿ ಚಿತ್ರ ರಚನೆ ಮುಂತಾದ ಕಲಾ ಪ್ರಾತ್ಯಕ್ಷಿಕೆ ನಡೆಯಲಿದೆ.

ಜನವರಿ 16ರಂದು ಶನಿವಾರ ನಡೆಯುವ ಪರ್ಯಾಯ ಪಂಚಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ ಪ್ರದರ್ಶನ ಮತ್ತು ಮಾರಾಟ ಹಾಗೂ ತುಳುನಾಡ ಪಾರಂಪರಿಕ ಪರಿಕರಗಳ ಪ್ರದರ್ಶನದ ಉದ್ಘಾಟನೆಯು ನಡೆಯಲಿದೆ. ಆಸಕ್ತರಿಗೆ ಮುಕ್ತ ಅವಕಾಶವಿರುತ್ತದೆ.

ಸ್ಥಳೀಯ ಶ್ರಮಜೀವಿಗಳು ತಯಾರಿಸಿದ/ಬೆಳೆಸಿದ ವಸ್ತುಗಳ ಮಾರಾಟದ ಮಳಿಗೆಯನ್ನು ಆರಂಭಿಸಿ, ಮಧ್ಯವರ್ತಿಗಳಿಲ್ಲದೆ ಸ್ಥಳೀಯರಿಗ ಪೂರ್ಣ ಲಾಭ ಗಳಿಸುವಂತೆ ಮಾಡುವುದು ಶ್ರೀಪಾದರ ಯೋಜನೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ.

ಶ್ರೀ ವಿಟ್ಠಲ ನಾಯಕ್, ಕಲ್ಲಡ್ಕ ಮತ್ತು ಬಳಗದವರಿಂದ ತುಳು ಸಂಸ್ಕøತಿ ಸಂಭ್ರಮ, ವಿ| ಕೃಷ್ಣ ಕುಮಾರ್ ಆಚಾರ್ಯ ಮೈಸೂರು ಮತ್ತು ಬಳಗದವರಿಂದ ತಾಳಮದ್ದಲೆ, ಶ್ರೀ ಸುಚೇತನ್ ರಂಗಸ್ವಾಮಿಯವರಿಂದ ಭಕ್ತಿ ಸಂಗೀತ, ಬೆಂಗಳೂರಿನ ಶ್ರೀ ರಾಜ್ಕಮಲ್ ಮತ್ತು ವೃಂದದವರಿಂದ ವೇಣು ನಿನಾದ, ನಾಡಿನ ಪ್ರಖ್ಯಾತ ಕಲಾವಿದರಿಂದ ಬಡಗುತಿಟ್ಟು ಯಕ್ಷಗಾನ, ಚೆನ್ನೈನ ಶ್ರೀ ಅಭಿಷೇಕ್ ರಘುರಾಮ್ ಅವರಿಂದ ಸಂಗೀತ, ಶ್ರೀಮತಿ ಜಯಂತಿ ಕುಮರೇಶ್ ಮತ್ತು ಬಳಗದವರಿಂದ ವೀಣಾ ವಾದನ, ಮೂಲ್ಕಿ ನವ ವೈಭವ ಕಲಾವಿದರಿಂದ ತುಳುನಾಡ ವೈಭವ, ಪಂಡಿತ್ ವೆಂಕಟೇಶ ಕುಮಾರ್ ಮತ್ತು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಹೀಗೆ ಮುಂತಾದ ಅಂತರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

ಜನವರಿ 18ರಂದು ಸೋಮವಾರ ಜೋಡುಕಟ್ಟೆಯಿಂದ ಮೇನೆಯಲ್ಲಿ ಶ್ರೀಮನ್ಮಧ್ವಾಚಾರ್ಯ ಹಾಗೂ ಶ್ರೀ ವಾದಿರಾಜ ಶ್ರೀಪಾದರ ಕೃತಿಗಳೊಂದಿಗೆ ರಥಬೀದಿವರೆಗೆ ಮೆರವಣಿಗೆ ನಡೆಯಲಿದೆ.

ಜನವರಿ 22 ರಂದು ಶುಕ್ರವಾರ ಸೌರಮಧ್ವನವಮಿಯಂದು ತುಳುಗೋಷ್ಠಿ ಹಾಗೂ ತುಳುಲಿಪಿ ಕಲಿಕೆಯ ಉದ್ಘಾಟನೆ ನಡೆಯಲಿದೆ.

ಜನವರಿ 23 ಶನಿವಾರ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು


Spread the love