ಜ. 22 ರಂದು ಉಡುಪಿ ಜಿಲ್ಲೆಯಲ್ಲಿ ಪ್ರಜಾ ಧ್ವನಿ ಯಾತ್ರೆ – 25000 ಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ – ಧ್ರುವನಾರಾಯಣ್

Spread the love

ಜ. 22 ರಂದು ಉಡುಪಿ ಜಿಲ್ಲೆಯಲ್ಲಿ ಪ್ರಜಾ ಧ್ವನಿ ಯಾತ್ರೆ – 25000 ಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ – ಧ್ರುವನಾರಾಯಣ್

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರಜಾಧ್ವನಿ ಬಸ್ ಯಾತ್ರೆಯ ಕಾರ್ಯಕ್ರಮ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಜನವರಿ 22ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಹೇಳಿದರು.

ಅವರು ಗುರುವಾರ ಉಡುಪಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ನಾಯಕರಾದ ಕೆ ಎಚ್ ಮುನಿಯಪ್ಪ, ಡಾ ಜಿ ಪರಮೇಶ್ವರ್, ಎಚ್ ಕೆ ಪಾಟೀಲ್ ಸೇರಿದಂತೆ ಜಿಲ್ಲೆಯ ನಾಯಕರು, ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರು ಭಾಗವಹಿಲಿದ್ದು ಕಾರ್ಯಕ್ರಮದಲ್ಲಿ 25000ಕ್ಕೂ ಅಧಿಕ ಜನ ಸೇರಲಿದ್ದಾರೆ ಎಂದರು.

ಪ್ರಜಾ ಧ್ವನಿ ಸಮಾವೇಶವನ್ನು ಪ್ರತಿ ಜಿಲ್ಲೆಯಲ್ಲೂ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ನಾಲ್ಕೈದು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕಾಂಗ್ರೆಸ್ ಪಕ್ಷದ ಕೊಡುಗೆ ಮತ್ತು ಅಧಿಕಾರದ ಅವಧಿಯಲ್ಲಿನ ಕಾರ್ಯಕ್ರಮ ತಿಳಿಸಿ ಜನಜಾಗೃತಿ ಮೂಡಿಸುವುದು ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ವೈಫಲ್ಯವನ್ನು ಜನರ ಮುಂದೆ ಇಡುವುದೇ ಈ ಸಮಾವೇಶದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಕಡೆ ಉತ್ತಮ ಬೆಂಬಲ ಸಿಗುತ್ತಿದೆ. ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿದ್ದಾರೆ. ಹಾಲಿ ಶಾಸಕರು ಕೂಡ ಪಕ್ಷಕ್ಕೆ ಸೇರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎರಡನೇ ಬಾರಿಗೆ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಒಳ್ಳೆಯ ಆಡಳಿತ ಹಾಗೂ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಅವಧಿಯಲ್ಲಿ ಬಿಜೆಪಿ ಯಾವ ರಾಜ್ಯದಲ್ಲೂ ಇಲ್ಲದಂತೆ ಮಿತಿಮೀರಿದ ಭ್ರಷ್ಟಾಚಾರ ನಡೆಸುತ್ತಿದೆ. ಈ ಬಗ್ಗೆ ಆರೋಪವನ್ನು ಅವರ ಪಕ್ಷದ ಶಾಸಕರುಗಳೇ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಬಿಜೆಪಿಯವರಿಗೆ ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು ಈಡೇರಿಸಲು ಈವರೆಗೆ ಸಾಧ್ಯವಾಗಿಲ್ಲ. ಈಗ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಜನ ಸಂಕಲ್ಪ ಯಾತ್ರೆ ಚುನಾವಣೆ ಬಂದಾಗ ಮಾತ್ರ, ಚುನಾವಣೆ ನಂತರ ಧನ ಸಂಕಲ್ಪ ಯಾತ್ರೆಯನ್ನು ಮಾಡುತ್ತಿದ್ದಾರೆ. ವ್ಯಾಪಾಕ ಭ್ರಷ್ಟಾಚಾರದ ಮೂಲಕ ಹಣ ಗಳಿಸುವುದೇ ಇವರ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ರೋಝಿ ಜಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ಯಸಭಾ ಸದಸ್ಯ ಪ್ರತಾಪನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ರಾಜ್ಯ ಮೀನುಗಾರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸೊನೇಗಾರ್, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಹರೀಶ್ ಕಿಣಿ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here