ಜ.22 ರಂದು ಕುಂದಾಪುರದಲ್ಲಿ ಮೊಗವೀರ ಭವನ ಲೋಕಾರ್ಪಣೆ

Spread the love

ಜ.22 ರಂದು ಕುಂದಾಪುರದಲ್ಲಿ ಮೊಗವೀರ ಭವನ ಲೋಕಾರ್ಪಣೆ

ಕುಂದಾಪುರ: ಮುಂಬೈಯ ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ ನೇತ್ರತ್ವದಲ್ಲಿ ಮೊಗವೀರ ಸಮಾಜದ ಪ್ರತೀಕವಾಗಿ ನಗರದ ಚಿಕ್ಕನ್‌ಸಾಲ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಹುಕೋಟಿ ರೂ. ವೆಚ್ಚದ ಸುಸಜ್ಜಿತ, ಹವಾನಿಯಂತ್ರಿತ ಮೊಗವೀರ ಭವನವನ್ನು ಜ.22 ರಂದು ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮೊಗವೀರ ಸಮಾಜದ ಮುಂದಾಳು ಹಾಗೂ ಉಡುಪಿ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕರಾದ ಡಾ.ಜಿ.ಶಂಕರ ತಿಳಿಸಿದ್ದಾರೆ.

ಮೊಗವೀರ ಭವನದಲ್ಲಿ ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಗವೀರ ಸಮಾಜ ಬಂಧುಗಳು, ಸರ್ಕಾರ ಹಾಗೂ ದಾನಿಗಳ ಸಹಕಾರದಿಂದ ನಿರ್ಮಿಸಲಾಗಿರುವ ಈ ಭವನದಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೊರೋನಾ ಸಂಕಷ್ಟದ ಕಾರಣಗಳಿಂದ ಭವನ ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದು ಇತ್ತೀಚೆಗೆ ಕಾಮಗಾರಿ ವೇಗ ಪಡೆದುಕೊಂಡು, ಈಗ ಅಂದುಕೊಂಡಂತೆ ಮೊಗವೀರ ಭವನ ನಿರ್ಮಾಣವಾಗಿದೆ. ಸುಮಾರು 10 ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತವಾದ ಸಭಾಭವನದ ನಿರ್ಮಾಣವಾಗಿದೆ. 60,000 ಚದರ ಅಡಿ ವಿಸ್ತಿರ್ಣದ ಕಟ್ಟಡ ವ್ಯವಸ್ಥಿತ ಮಾದರಿಯಲ್ಲಿ, ವಾಸ್ತು ವಿನ್ಯಾಸದೊಂದಿಗೆ, ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಈ ಸಭಾಭವನ ಮೂರು ಮಹಡಿಗಳನ್ನು ಹೊಂದಿದೆ. ಮೂರನೇ ಮಹಡಿಯಲ್ಲಿ ಪೂರ್ವಾಭಿಮುಖವಾಗಿ ಸಭಾ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಾಕಷ್ಟು ವಿಶಾಲವಾದ ಸಭಾಮಂಟಪ, ಎದುರಿಗೆ ವಿಶಾಲವಾದ ಸಭಾಂಗಣದಲ್ಲಿ 850 ಜನ ಕುಳಿತು ಕಾರ್ಯಕಮ ವೀಕ್ಷಿಸಬಹುದಾಗಿದೆ. ಹೊರಭಾಗದಲ್ಲಿ ವಿಶಾಲ ಕಾರಿಡಾರ್ ವ್ಯವಸ್ಥೆ ಇರುತ್ತದೆ. ಎರಡನೇ ಮಹಡಿಯಲ್ಲಿ ವಿಶಾಲವಾದ ಭೋಜನಾಲಯ ನಿರ್ಮಾಣವಾಗಿದೆ. ಏಕಕಾಲಕ್ಕೆ ಸುಮಾರು 450 ಜನ ಕುಳಿತು ಹಾಗೂ ಬಫೆಯಲ್ಲಿ ಊಟ ಮಾಡಬಹುದಾಗಿದೆ. ಇದಕ್ಕೆ ಪೂರಕವಾಗಿ ಅತ್ಯಾಧುನಿಕ ಮಾದರಿಯ ಅಡುಗೆ ಮನೆ, ಸಸ್ಯಹಾರ ಮತ್ತು ಮಾಂಸಹಾರಕ್ಕೆ ಪತ್ಯೇಕ ಪಾತ್ರೆ ಹಾಗೂ ಅಡುಗೆ ಕೋಣೆ ವ್ಯವಸ್ಥೆ, ಸುಸಜ್ಜಿತ ಉಗ್ರಾಣ ಕೋಣೆ. ಎರಡು ಲಿಪ್ಟ್ ವ್ಯವಸ್ಥೆ ಹಾಗೂ ಎರಡು ಕಡೆಗಳಲ್ಲಿ ಮೆಟ್ಟಿಲು ವ್ಯವಸ್ಥೆಯೂ ಇದೆ.

ಸರಕಾರ, ದಾನಿಗಳು, ಮೊಗವೀರ ಸಮಾಜದ ಸಮಸ್ತರ ಆರ್ಥಿಕ ಸಹಕಾರದಿಂದ ನಿರ್ಮಿಸಲಾಗಿರುವ ಮೊಗವೀರ ಭವನದ ತಳ ಅಂತಸ್ತು ಮತ್ತು ಪಥಮ ಮಹಡಿಯನ್ನು ಸಂಪೂರ್ಣ ವಾಹನ ನಿಲುಗಡೆಗೇ ಮೀಸಲಿಡಲಾಗಿದೆ. ತಳ ಅಂತಸ್ತಿನಲ್ಲಿ ಕನಿಷ್ಠ 80 ಕಾರುಗಳನ್ನು ನಿಲ್ಲಿಸಬಹುದಾಗಿದೆ. ಪಥಮ ಮಹಡಿಯನ್ನು ಕೂಡಾ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 160ಕ್ಕೂ ಮಿಕ್ಕಿ ಕಾರುಗಳನ್ನು ನಿಲ್ಲಿಸಬಹುದಾಗಿದೆ. ಎದುರು ಪಾರ್ಶ್ವದಲ್ಲಿ ಬಸ್ ಇತರ ವಾಹನಗಳು ನಿಲ್ಲಲು ಸ್ಥಳವಕಾಶ ಇದೆ. ಚಿಕನ್‌ಸಾಲು ರಸ್ತೆ ಅಗಲೀಕರಣವಾದರೂ ಸಭಾಭವನದ ಎದುರಿನ ಪಾರ್ಕಿಂಗ್ ಪದೇಶಕ್ಕೆ ತೊಂದರೆ ಇಲ್ಲ. ಭವಿಷ್ಯದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಗಾಗಿ ಭವನದ ಸಮೀಪದಲ್ಲಿ 28 ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಲಾಗಿದೆ. ಇದರಿಂದಾಗಿ ಕುಂದಾಪುರದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇರುವ ಸಭಾಭವನ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.

ಜ.೨೨ ಕ್ಕೆ ಲೋಕಾರ್ಪಣೆ :
ಕೊರೋನಾ ಕಾರಣದಿಂದಾಗಿ ನಿರ್ಮಾಣ ಕಾಮಗಾರಿಯಲ್ಲಿ ವಿಳಂಭವಾಗಿದ್ದು, ಇದೀಗ ಸಭಾಭವನದ ಬಹುತೇಕ ಕಾಮಗಾರಿ ಹಾಗೂ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಜ.೨೨ ರಂದು ಬೆಳಿಗ್ಗೆ ೧೦.೩೦ ಕ್ಕೆ ಭವನದ ಲೋಕಾರ್ಪಣೆ ನಡೆಯಲಿದೆ.

ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೊಗವೀರ ಭವನವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶೀನಿವಾಸ ಪೂಜಾರಿಯವರು ಉದ್ಘಾಟಿಸಲಿದ್ದಾರೆ. ಮಹಿಷಾಸುರಮರ್ದಿನಿ ಸಭಾಂಗಣವನ್ನು ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಸಚಿವ ಸುನೀಲ್ ಕುಮಾರ್ ‘ ಅಮ್ಮ ಮಿನಿಹಾಲ್ ‘
ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅನ್ನಪೂರ್ಣೇಶ್ವರಿ ಭೋಜನಾಲಯ ಉದ್ಘಾಟನೆ ಮಾಡಲಿದ್ದಾರೆ. ಕೇಂದ ಸಚಿವೆ ಶೋಭಾ ಕರಂದ್ಲಾಜೆ ಕಚೇರಿ ಉದ್ಘಾಟಿಸಲಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಲಿಫ್ಟ್ ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಪಾಕಶಾಲೆಯನ್ನು ಬೈಂದೂರು ಕ್ಷೇತದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ವೇದಿಕೆಯನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಗೌರವಾಧ್ಯಕ್ಷ ಸುರೇಶ್ ಆರ್.ಕಾಂಚನ್ ಉದ್ಘಾಟಿಸಲಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪತಾಪ್‌ಚಂದ್ರ ಶೆಟ್ಟಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಎ.ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉದ್ಯಮಿ ಆನಂದ್ ಸಿ.ಕುಂದರ್, ಮಾಜಿ
ಶಾಸಕ ಕೆ.ಗೋಪಾಲ ಪೂಜಾರಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಜಯ ಸಿ.ಕೋಟ್ಯಾನ್, ಗೋಪಾಲ ಎಸ್.ಪುತ್ರನ್, ಡಾ.ಉಮೇಶ ಪುತ್ರನ್, ಸತೀಶ ಅಮೀನ್, ರಾಜೇಂದ ಹಿರಿಯಡಕ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 9-30ರಿಂದ 10-15ರ ತನಕ ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇವರಿಂದ ನೃತ್ಯ ಸಿಂಚನ, ಮಧ್ಯಾಹ್ನ 12-30ರಿಂದ 3 ಗಂಟೆಯ ವರೆಗೆ ಗಣೇಶ ಎರ್ಮಾಳ್ ಮತ್ತು ಬಳಗದವಿಂದ ಸುಗಮ ಸಂಗೀತ, ಗ್ರೂಪ್ಸ್ x’ ಡಾನ್ಸ್ ಅಕಾಡೆಮಿ, ಸುರತ್ಕಲ್ ಇವರಿಂದ ಜಾನಪದ ಹಾಗೂ ಸಿನಿಮಾ ನೃತ್ಯ ಸಂಗಮ, ಡ್ರಾಮಾ ಜ್ಯೂನಿಯರ್ ವಿಜೇತೆ ಸಮೃದ್ಧಿ ಇವರಿಂದ ಯಕ್ಷ ನೃತ್ಯ, ಮಧ್ಯಾಹ್ನ 3 ಗಂಟೆಯಿಂದ ಕಾಂಚನಿ ಕಲಾಕೇಂದ ಮುಂಬೈ ಇವರ ಪ್ರಾಯೋಜಕತ್ವದಲ್ಲಿ ಭಾಗವತ ಸದಾಶಿವ ಅಮೀನ್ ಸಾರಥ್ಯದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಾನಶೂರ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಜಿ.ಶಂಕರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿಗಳಾದ ಆನಂದ ಸಿ ಕುಂದರ್, ಕೆ.ಕೆ.ಕಾಂಚನ್, ಮುಂಬೈಯ ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿಯ ಕುಂದಾಪುರ ಶಾಖೆಯ ಅಧ್ಯಕ್ಷ ಉದಯ್‌ಕುಮಾರ ಹಟ್ಟಿಯಂಗಡಿ, ಮಾಜಿ ಅಧ್ಯಕ್ಷ ಎಂ.ಎಂ.ಸುವರ್ಣ, ಕಾರ್ಯದರ್ಶಿ ಪ್ರಭಾಕರ ಇದ್ದರು.


Spread the love

Leave a Reply

Please enter your comment!
Please enter your name here