
ಜ.28, ಕ್ರೈಸ್ ರಾಜ್ಯ ಮಟ್ಟದ ವಿಜ್ಞಾನ ಮೇಳದ ಸಮಾರೋಪ
ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಘ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳ 2023 ಕಾರ್ಯಕ್ರಮದ ಸಮಾರೋಪ ಸಮಾರಂಭವು ಜ. 28 ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಅವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಬಿ. ಶ್ರೀರಾಮುಲು ಅವರು ಭಾಗವಹಿಸಲಿದ್ದಾರೆ. ಉನ್ನತ ಶಿಕ್ಷಣ, ಐಟಿಬಿಟಿ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಅಶ್ವತ್ಥ ನಾರಾಯಣ ಸಿ.ಎಸ್. ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಂದಿತಾ ಶರ್ಮಾ, ಎನ್ ಸಿಸಿ ಡೆಪ್ಯೂಟಿ ಡೈರಕ್ಟರ್ ಜನರಲ್ ಏರ್ ಕಮಾಂಡರ್ ಬಿ.ಎಸ್. ಕನ್ವಾರ್ , ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀ ಐ.ಎಎಸ್.ಎನ್. ಪ್ರಸಾದ್ ಅವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಘ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ವಿಜ್ಞಾನ ಮೇಳ 2023 ದಲ್ಲಿ 200 ವಿವಿಧ ವಸತಿ ಶಾಲೆಗಳ ವಿದ್ಯಾರ್ಥಿಗಳು ಹಲವು ಮಾದರಿಗಳ ವಿಜ್ಞಾನ ಮಾದರಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದ್ದಾರೆ.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವಿಜ್ಞಾನ ಮಾದರಿಗಳಲ್ಲಿ ಹಲವಾರು ಮಾದರಿಗಳು ವಿಶೇಷ ಗಮನ ಸೆಳೆಯುತ್ತಿವೆ. ವಾತಾವರಣದಲ್ಲಿ ಹೆಚ್ಚಿನ ಇಂಗಾಲ ಡೈಯಾಕ್ಸೈಡ್ ಆಮ್ಲಜನಕವಾಗಿ ಪರಿವರ್ತನೆ ಮಾಡುವ ಮಾದರಿ, ಬಯೋಗ್ಯಾಸ್ ಗೆ ಸಂಬಂಧಿಸಿದ ಆಧುನಿಕ ಮಾದರಿ, ಸದೃಡ ಹಾಗೂ ಆಧುನಿಕ ಕೃಷಿ ವಿಧಾನ, ವಿದ್ಯುತ್ ಕಳವು ನಿಯಂತ್ರಣ, ಕೃಷಿ ವಿಧಾನದಲ್ಲಿ ತಾಂತ್ರಿಕವಾಗಿ ನೀರು ಸದ್ಬಳಕೆ, ವಾತಾವರಣದಲ್ಲಿನ ತೇವಾಂಶದಿಂದ ವಿದ್ಯುತ್ ಆಗಿ ಪರಿವರ್ತನೆ, ಪ್ರವಾಹ ಮುನ್ಸೂಚನೆಯ ಆಧುನಿಕ ತಂತ್ರಜ್ಞಾನ, ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹಾಗೂ ರೊಬೋಟ್ ಗೆ ಸಂಬಂಧಿಸಿದ ತಂತ್ರಜ್ಞಾನ, ಸೋಲಾರ್ ಹಾಗೂ ವಾಹನ ಚಾಲನೆಯಿಂದ ವಿದ್ಯುತ್ತಾಗಿ ಪರಿವರ್ತಿಸುವ ವಿಧಾನಕ್ಕೆ ಸಂಬಂಧಿಸಿದ ವಿಜ್ಞಾನ ಮಾದರಿಗಳು, ರಸ್ತೆ ಸುರಕ್ಷತೆ, ನೈಸರ್ಗಿಕ ತಂಪು, (ನ್ಯಾಚುರಲ್ ಎಸಿ), ಸೆನ್ಸಾರ್ ಬೀದಿ ದೀಪ,ಅಂಗವಿಕಲರಿಗೆ ಸೆನ್ಸಾರ್ ಸ್ಟಿಕ್, ಮಾದರಿ ಕೈಗಾರಿಕಾ ಪದ್ದತಿ, ಸುರಕ್ಷತಾ ವಾಹನ ಸಂಚಾರ ಸೇರಿದಂತೆ ಅನೇಕ ವಿಜ್ಞಾನ ಮಾದರಿಗಳು ಆಕರ್ಷಣೀಯವಾಗಿದ್ದು, ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಪ್ರಸ್ತುತ ಪಡಿಸಿದ್ದಾರೆ.
ಭಾರತೀಯ ಸೇನೆಯು ಈ ವಿಜ್ಞಾನ ಮೇಳದಲ್ಲಿ ಪ್ರಸುತ ಪಡಿಸಿರುವ ಆಕರ್ಷಕ ಶಸ್ತ್ರಾಸ್ತಗಳ ಪ್ರದರ್ಶನವು ವಿಶೇಷ ಗಮನ ಸೆಳೆಯುತ್ತಿದ್ದು, ಅದರಲ್ಲೂ ವಿದ್ಯಾರ್ಥಿಗಳನ್ನು ಬಹುವಾಗಿ ಆಕರ್ಷಿಸುತ್ತಿದೆ. ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳು ಪ್ರದರ್ಶಿಸಿರುವ ವಿಜ್ಞಾನದ ಪ್ರಯೋಗಗಳ ಪ್ರದರ್ಶನ, ಪ್ರಾತ್ಯಕ್ಷಿಕೆಗಳು, ಇತ್ತೀಚಿನ ರಾಕೇಟ್ ಗಳ ಮಾದರಿ, ವಿಮಾನ ಹಾಗೂ ಹೆಲಿಕಾಪ್ಟರ್ ಮಾದರಿಗಳ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸುತ್ತಿವೆ. ವಿಜ್ಞಾನ ಮೇಳದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನವು ಕೂಡ ವಿಶೇಷ ಆಕರ್ಷಣೆಯಾಗಿದೆ.
ಈ ರಾಜ್ಯ ಮಟ್ಟದ ವಿಜ್ಞಾನ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶವನ್ನು ಕಲ್ಪಿಸಲಾಗಿದೆ. ಮೊದಲನೆ ದಿನ ಸಾವಿರಾರು ಶಾಲಾ ವಿದ್ಯಾರ್ಥಿಗಳು ಮೇಳಕ್ಕೆ ಆಗಮಿಸಿ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.