ಟಿಪ್ಪು ಜಯಂತಿ ಆಚರಿಸಿಯೇ ಸಿದ್ದ, ಬರುವುದು ಬಿಡುವುದು ಅವರವರಿಗೆ ಬಿಟ್ಟ ವಿಷಯ; ಸಿದ್ದರಾಮಯ್ಯ
ಮಂಗಳೂರು: ಕಳೆದ ಬಾರಿಯಂತೆ ಈ ಬಾರಿಯೂ ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರಂತೆಯೇ ಕಾರ್ಯಕ್ರಮಗಳನ್ನು ನಡೆಯಲಿವೆ. ಬಿಜೆಪಿಯವರು ಬರುವುದು ಬಿಡುವುದು ಅವರಿಗೆ ಬಿಟ್ಟ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಭಾನುವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆಗಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸುದ್ದಿಗಾರರೋಂದಿಗೆ ಮಾತನಾಡಿದರು.
ಟಿಪ್ಪು ಜಯಂತಿ ಆಚರಣೆಯ ಸಂಬಂಧಿಸಿ ಪ್ರೋಟೊಕಾಲ್ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲಾಗುತ್ತದೆ ಸಮಾರಂಭದಲ್ಲಿ ಪಾಲ್ಗೋಳ್ಳುವುದು ಬಿಡುಡುವುದು ಅವರವರ ಇಷ್ಟಕ್ಕೆ ಬಿಟ್ಟಿದ್ದು. ಟಿಪ್ಪುಜಯಂತಿ ಆಚರಣೆಯ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ರಾಜಕೀಯ ಕಾರಣದಿಂದ ಟಿಪ್ಪು ಜಯಂತಿ ವಿರೋಧಿಸುತ್ತಿದ್ದು, ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ ಕೂಡ ಸಾಥ್ ನೀಡಿದ್ದರು. ಅಂದು ಟಿಪ್ಪು ಸುಲ್ತಾನನ ಪೋಷಾಕ ಧರಿಸಿ ಖಡ್ಗ ಝಳಪಿಸಿ ಇಂದು ಟಿಪ್ಪು ಜಯಂತಿಗೆ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ ಎಂದರು.
ಬಂಟ್ವಾಳದಲ್ಲಿ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೆ ಮಂಗಳೂರಿಗೆ ಬಂದ ಸಿದ್ದರಾಮಯ್ಯ
ಮಂಗಳೂರು: ದಕ ಜಿಲ್ಲೆಯ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಶಿಲನ್ಯಾಸ ನೆರವೇರಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮಂಗಳೂರಿಗೆ ಆಗಮಿಸಿದರು.
ಭಾನುವಾರ ಬೆಳಿಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಅಲ್ಲಿಂದ ರಸ್ತೆ ಮಾರ್ಗವಾಗಿ ವಾಹನದಲ್ಲಿ ಬಂಟ್ವಾಳಕ್ಕೆ ತೆರಳಿದರು.
ಬಿ ಸಿ ರೋಡಿನಲ್ಲಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ, ಮೆಸ್ಕಾಂ ಇಲಾಖಾ ಕಟ್ಟಡ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಬಂಟ್ವಾಳದಲ್ಲಿ ನಿರ್ಮಾಣಗೊಂಡಿರುವ ನಿರೀಕ್ಷಣಾ ಮಂದಿರ, ಟ್ರೀಪಾರ್ಕ್, 100 ಹಾಸಿಗೆಗಳ ಮೇಲ್ದರ್ಜೆಗೇರಿದ ನೂತನ ಸರಕಾರಿ ಆಸ್ಪತ್ರೆ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ನಗರ ಸಮಗ್ರ ಕುಡಿಯುವ ನೀರು ಯೋಜನೆ ಇವುಗಳನ್ನು ಸಾರ್ವಜನಿಕ ಸೇವೆಗೆ ಅರ್ಪಿಸುವರು. ಬಳಿಕ ಕೆಲವು ಬಹುಗ್ರಾಮ ಕುಡಿಯುವ ನೀರು ಯೋಜನೆಗಳು, ಪಂಜೆ ಮಂಗೇಶರಾಯರ ಭವನ ಮೊದಲಾದ ಕೆಲವೊಂದು ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸುವರು. 148.29 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ, 73.21 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಶಿಲಾನ್ಯಾಸ ಸೇರಿದಂತೆ ಒಟ್ಟು 221.50 ಕೋಟಿ ರೂಪಾಯಿಗಳ ಬೃಹತ್ ಅಭಿವೃದ್ದಿ ಕಾಮಗಾರಿಗಳನ್ನು ಜನತೆಗೆ ಅರ್ಪಿಸುವ ರಾಜ್ಯದ ಮುಖ್ಯಮಂತ್ರಿಗಳು ಬಳಿಕ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಿಂಭಾಗದ ವಿಶಾಲ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು.