ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಕಾರ್ಣಿಕ್ ಹೆಸರು ಮುದ್ರಿಸದಂತೆ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು: ಕರ್ನಾಟಕ ಸರ್ಕಾರವು ಜನತೆಯ ತೀವ್ರ ವಿರೋಧಗಳ ನಡುವೆಯೂ ನವೆಂಬರ್ 10 ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವುದನ್ನು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ನಿಷ್ಟುರವಾಗಿ ಖಂಡಿಸಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಪ್ರಕಟಿಸದಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.
ಟಿಪ್ಪು ಕನ್ನಡ ವಿರೋಧಿ ಮತ್ತು ಹಿಂದೂ ಹಾಗೂ ಕ್ರೈಸ್ತ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಸಾರ್ವಜನಿಕರು ಹಾಗೂ ನಾಡಿನ ವಿಚಾರವಾದಿಗಳು ದೊಡ್ಡ ಪ್ರಮಾಣದಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆಯ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿರೋಧ ಹಾಗೂ ಪ್ರತಿಭಟನೆ ನಡೆದು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಅದರಲ್ಲೂ ಶಾಂತ ಜಿಲ್ಲೆ ಎನಿಸಿಕೊಂಡಿದ್ದ ಕೊಡಗು ಜಿಲ್ಲೆಯು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಈ ರೀತಿ ಒಬ್ಬ ಸಮಾಜಘಾತುಕ ವ್ಯಕ್ತಿಯನ್ನು ವೈಭವೀಕರಿಸಿ ಆತನ ಜಯಂತಿ ಆಚರಿಸಲು ಹೊರಟಿರುವುದು ನಿಜಕ್ಕೂ ದುರಂತವೆಂದು ಖೇದ ವ್ಯಕ್ತಪಡಿಸಿದ್ದಾರೆ. ಟಿಪ್ಪು ಜಯಂತಿಯನ್ನು ತೀವ್ರವಾಗಿ ಖಂಡಿಸಿದ್ದು, ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದಿರಲು ಸೂಚಿಸಿದ್ದಾರೆ.