ಟಿ.ಡಿ. ರಾಜೇಗೌಡಗೆ ಬಿಗ್ ರಿಲೀಫ್: ಶೃಂಗೇರಿ ಮರು ಮತ ಎಣಿಕೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ನವದೆಹಲಿ: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಿಂದ ಶಾಸಕ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರಿಗೆ ಸುಪ್ರಿಂ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಹೈಕೋರ್ಟ್ನ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಶಾಸಕ ಸ್ಥಾನವನ್ನು ಮುಂದುವರೆಸುವಂತೆ ಆದೇಶಿಸಿ, ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿ ವಿಚಾರಣೆಯನ್ನು ಮೇ.21 ಕ್ಕೆ ಮುಂದೂಡಿದೆ. ಇದರೊಂದಿಗೆ ಕಾಂಗ್ರೆಸ್ನ ರಾಜೇಗೌಡ ಅವರಿಗೆ ಮತ್ತೆ ಶಾಸಕ ಸ್ಥಾನ ದಕ್ಕಿದಂತಾಗಿದ್ದು, ಇನ್ನೊಂದೆಡೆ ಮೊನ್ನೆ ಅಷ್ಟೇ ಮರು ಮತ ಎಣಿಕೆಯಲ್ಲಿ ಗೆದ್ದು ಶಾಸಕರಾಗಿ ಪ್ರಮಾಣ ವಚನ ಸ್ವೀರಿಕರಿಸಿದ್ದ ಬಿಜೆಪಿಯ ಜೀವರಾಜ್ಗೆ ತಾತ್ಕಾಲಿಕ ಹಿನ್ನಡೆಯಾದಂತಾಗಿದೆ.
ಯಥಾಸ್ಥಿತಿ ಮುಂದುವರಿಸಲು ಸುಪ್ರೀಂ ಸೂಚನೆ
ಅಂಚೆ ಮತ ಮರು ಎಣಿಕೆಗೆ ಆದೇಶಿಸಿದ್ದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ನ ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಮರು ಮತ ಎಣಿಕೆಯ ದಾಖಲೆ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿ, ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿದೆ. ಅಂಚೆ ಮತ ಮರು ಎಣಿಕೆಯಲ್ಲಿ ಬಿಜೆಪಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿದ್ದರು. ಆದರೆ, ಇದೀಗ ಯಥಾಸ್ಥಿತಿ ಮುಂದುವರಿಸಲು ಸುಪ್ರೀ ಕೋರ್ಟ್ ಸೂಚನೆ ನೀಡಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರೇ ಮತ್ತೆ ಶಾಸಕರಾಗಿ ಮುಂದುವರಿಯಲಿದ್ದಾರೆ.
ಸಂತಸಗೊಂಡ ರಾಜೇಗೌಡ
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಆದೇಶ ಮತ್ತು ನಂತರದ ಪ್ರಕ್ರಿಯೆಗೆ ತಡೆ ನೀಡಿದ್ದು, ಸುಪ್ರೀಂಕೋರ್ಟ್ನಲ್ಲಿ ನನಗೆ ನ್ಯಾಯ ಸಿಕ್ಕಿದೆ. ಅಂಚೆ ಮತ ಎಣಿಕೆಯಲ್ಲಿ 2 ಮತ ನನ್ನ ಪರವಾಗಿ ಬಂದಿತ್ತು. ನನ್ನ ಮತಗಳು ಹೆಚ್ಚಾಗುವ ಬದಲು ಕಡಿಮೆ ತೋರಿಸಲಾಗಿತ್ತು. ಈ ಹಂತದಲ್ಲಿ ಅಕ್ರಮವಾಗಿದೆ ಎಂದು ಅನುಮಾನ ಇತ್ತು. ಹೀಗಾಗಿ ನಾನು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಇದರಿಂದ ನ್ಯಾಯ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮರು ಮತ ಎಣಿಕೆಯಲ್ಲಿ ರಾಜೇಗೌಡಗೆ ಸೋಲು
2023 ರ ಚುನಾವಣೆಯಲ್ಲಿ 201 ಮತಗಳ ಅಂತರದಿಂದ ಗೆದ್ದಿದ್ದ ಕಾಂಗ್ರೆಸ್ ರಾಜೇಗೌಡರು, 2026 ರ ಮರು ಎಣಿಕೆಯಲ್ಲಿ 52 ಮತಗಳಿಂದ ಸೋಲನ್ನಪ್ಪಿದ್ದರು. ಕಳೆದ ಬಾರಿ ಮಾನ್ಯವಾಗಿದ್ದ 255 ಮತಗಳು ಈ ಬಾರಿ ಅಮಾನ್ಯವಾಗಿದ್ದು ಹೇಗೆ ಎಂದು ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
2023ರಲ್ಲಿ ಪಡೆದ ಅಂಚೆ ಮತಗಳ ಸಂಖ್ಯೆ
1822 ಅಂಚೆ ಮತಗಳ ಪೈಕಿ 3 ನೋಟಾ, 267 ಮತಗಳು ಅಸಿಂಧು, 1540 ಮತಗಳು ಸಿಂಧು ಆಗಿದ್ದು, ಈ ಪೈಕಿ ಬಿಜೆಪಿಯ ಡಿ.ಎನ್ ಜೀವರಾಜ್ 692 ಮತಗಳು ಪಡೆದಿದ್ದರೆ, ಬಿಜೆಪಿಯ ಟಿ.ಡಿ ರಾಜೇಗೌಡ 569 ಮತಗಳು ಪಡೆದುಕೊಂಡಿದ್ದರು. ಇದರೊಂದಿಗೆ ರಾಜೇಗೌಡ 201 ಮತಗಳಿಂದ ಗೆಲುವು ಸಾಧಿಸಿದ್ದರು.
2026ರಲ್ಲಿ ಮರು ಮತ ಎಣಿಕೆ ವಿವರ
ಆದ್ರೆ, ಮರು ಎಣಿಕೆ ಬಳಿಕ ಡಿ.ಎನ್ ಜೀವರಾಜ್ ಅವರಿಗೆ 690 ಮತ ಬಂದಿದ್ದು, ಟಿ.ಡಿ ರಾಜೇಗೌಡ ಅವರಿಗೆ 314 ಮತಗಳು ಸಿಕ್ಕಿವೆ. 255 ಮತಗಳು ಡಬಲ್ ಟಿಕ್ ಆಗಿರುವ ಹಿನ್ನೆಲೆ ಅಸಿಂಧುವ ಆಗಿವೆ. ಹೀಗಾಗಿ 2026 ಮೇ 2ರಂದು ನಡೆದ ಮರು ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿಯ ಜೀವರಾಜ್ 52 ಮತಗಳಿಂದ ಗೆಲುವು ಸಾಧಿಸಿದ್ದರು.
ಪ್ರಕರಣ ಹಿನ್ನೆಲೆ
2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಜೀವರಾಜ್ ಅವರು ಸೋಲು ಕಂಡಿದ್ದು, ಕಾಂಗ್ರೆಸ್ ರಾಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದ್ರೆ, ಅಂಚೆ ಮತಗಳ ಎಣಿಕೆಯಲ್ಲಿ ಲೋಪವಿಧೆಯೆಂದು ಪ್ರಶ್ನಿಸಿ ಜೀವರಾಜ್ ಅವರು ನ್ಯಾಯಾಲಯದ ಮೊರೆಹೋಗಿದ್ದರು. ಇದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮರು ಎಣಿಕೆಗೆ ಆದೇಶ ನೀಡಿತ್ತು. ಅದರಂತೆ ಮರು ಎಣಿಕೆ ಸಂದರ್ಭದಲ್ಲಿ ಜೀವರಾಜ್ ಅವರು ಗೆಲುವು ಸಾಧಿಸಿದ್ದು, ಚುನಾವಣಾ ಆಯೋಗ ಜೀವರಾಜ್ ಅವರನ್ನು ಶಾಸಕ ಎಂದು ಘೋಷಿಸಿ ದೃಢೀಕರಣ ಪತ್ರ ನೀಡಿತ್ತು.ಬಳಿಕ ಜೀವರಾಜ್ ಅವರು ಎರಡುವರೆ ವರ್ಷದ ಬಳಿಕ ಮತ್ತೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
