ಟೈಲರ್ ಶಾಪ್‍ನಲ್ಲಿ ನಡೆದಿತ್ತು ಹತ್ಯೆಗೆ ಮಾಸ್ಟರ್ ಪ್ಲ್ಯಾನ್!

Spread the love

ಟೈಲರ್ ಶಾಪ್‍ನಲ್ಲಿ ನಡೆದಿತ್ತು ಹತ್ಯೆಗೆ ಮಾಸ್ಟರ್ ಪ್ಲ್ಯಾನ್!

  • ಮಲಯಾಳಂ ಚಿತ್ರ ಕುರೂಪ್ ಕಥೆಯನ್ನು ಆಧರಿಸಿ ಕೊಲೆ ಸಂಚು. ಹತ್ಯೆಗೂ ಮೊದಲೇ ಸ್ಪಾಟ್ ನೋಡಲು ಬಂದ ಹತ್ಯೆಕೋರರು.

 ಕುಂದಾಪುರ: ಬೈಂದೂರಿನ ಪಡುವರಿ ಗ್ರಾಮದ ನಿಸರ್ಗ ರಮಣೀಯ ತಾಣ ಒತ್ತಿನೆಣೆ ಹೇನ್‍ಬೇರು ಎಂಬಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಟೋಟಕ ಸಂಗತಿಗಳು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಆರೋಪಿಗಳಾದ ಸದಾನಂದ ಶೇರಿಗಾರ್, ಶಿಲ್ಪಾ, ಸತೀಶ್ ದೇವಾಡಿಗ, ನಿತ್ಯಾನಂದ ದೇವಾಡಿಗ

ಅಮಾಯಕ ಆನಂದ ದೇವಾಡಿಗ ಅವರನ್ನು ಕೊಲೆ ಮಾಡುವ ಮೂಲಕ ಮರ್ಡರ್ ಪ್ಲ್ಯಾನ್ ರೂಪಿಸಿದ್ದು ಪ್ರಕರಣದ ಪ್ರಥಮ ಆರೋಪಿ ಸದಾನಂದ ಶೇರಿಗಾರ್ ಅವರ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ. ಆರೋಪಿಗಳಲ್ಲಿ ಒಬ್ಬನಾದ ಸತೀಶ್ ದೇವಾಡಿಗ ಟೈಲರಿಂಗ್ ಅಂಗಡಿ ನಡೆಸುತ್ತಿದ್ದು ಆತನ ಅಂಗಡಿಯಲ್ಲೇ ಕುಳಿತು ಕೊಲೆ ಪ್ರಕರಣದ ಪ್ಲ್ಯಾನ್ ಸಿದ್ದ ಪಡಿಸಲಾಗಿತ್ತು.

ಆನಂದ ದೇವಾಡಿಗ

ಪ್ರಕರಣದ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಅವರು ಖಾಸಗಿ ಸರ್ವೆಯರ್ ಆಗಿದ್ದ ಸದಾನಂದ ಶೇರೆಗಾರ್ ಜಾಗ ಹಾಗೂ ಹಣದ ವಿಚಾರದ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದು, ಆ ವಿಚಾರದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಆದರೆ ಇದು ಸಾಧ್ಯವಾಗದೇ ಇದ್ದುದರಿಂದ ತನ್ನ ಗೆಳತಿ ಶಿಲ್ಪಾ ಹಾಗೂ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಅವರಲ್ಲಿ ಸಮಸ್ಯೆಯನ್ನು ಹೇಳಿಕೊಂಡಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಡ ಹೇಳಿದ್ದನು.

ಎಸ್ ಟಿ ಸಿದ್ದಲಿಂಗಪ್ಪ, ಜಿಲ್ಲಾ ಹೆಚ್ಚುವರಿ ಎಸ್ಪಿ

ಕುರೂಪ್ ಕಥೆಯನ್ನು ಆಧರಿಸಿ ಕೊಲೆ ಸಂಚು:
ಆ ಬಳಿಕ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಭಾವನಿಗೆ ಧೈರ್ಯ ತುಂಬಿ ಮಲಯಾಳಂ ಚಿತ್ರ ಕುರೂಪ್ ಕಥೆಯನ್ನು ಆಧರಿಸಿ ಕೊಲೆ ಸಂಚನ್ನು ರೂಪಿಸುತ್ತಾರೆ. ಘಟನೆ ನಡೆದ ದಿನ ಸದಾನಂದ ಶೇರೆಗಾರ್ ತನ್ನ ಸಹೋದರನಿಗೆ ಫೆÇೀನ್ ಕರೆ ಮಾಡಿ ತಾನು ನಾಪತ್ತೆಯಾಗಿದ್ದೇನೆ ಎಂದು ಪೆÇಲೀಸರಿಗೆ ದೂರು ನೀಡಲು ತಿಳಿಸಿದ್ದಾನೆ. ಆದರೆ ಸಹೋದರ ಯಾವುದೇ ದೂರು ನೀಡಿರಲಿಲ್ಲ.

ಅಮಾಯಕನ ಆಯ್ಕೆಗೆ ಗೆಳತಿ ಶಿಲ್ಪಾ ಸಾಥ್:
ಈ ಮಧ್ಯೆ ಶಿಲ್ಪಾ ತನ್ನ ಪರಿಚಯಸ್ಥ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಆನಂದ ದೇವಾಡಿಗನಿಗೆ ತನ್ನ ಮನೆಗೆ ಕರೆಯಿಸಿ ಲೈಂಗಿಕ ಸುಖ ನೀಡುವ ಮಾತ್ರೆ ಎಂದು ನಂಬಿಸಿ ನಿದ್ದೆ ಬರಿಸುವ ಮಾತ್ರೆಯನ್ನು ಮದ್ಯದೊಳಗೆ ಬೆರಿಸಿ ಕಂಠ ಪೂರ್ತಿ ಮದ್ಯವನ್ನು ಕುಡಿಸುತ್ತಾಳೆ. ಆನಂಧ ದೇವಾಡಿಗ ಸಂಪೂರ್ಣ ನಿದ್ರೆಗೆ ಹೋದ ಬಳಿಕ ಸದಾನಂದ ಶೇರೆಗಾರ್‍ಗೆ ಬರ ಹೇಳಿ ಆತನನ್ನು ಕಾರಿನಲ್ಲಿ ಹಾಕಿ ಶಿಲ್ಪಾ ಮತ್ತು ಸದಾನಂದ ಶೇರೆಗಾರ್ ಬೈಂದೂರಿಗೆ ತೆರಳಿದ್ದಾರೆ. ಇನ್ನೊಂದು ಕಾರಿನಲ್ಲಿ ಸದಾನಂದ ಶೇರೆಗಾರ್ ಅವರ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಬಂದಿದ್ದಾರೆ.

ಈ ವೇಳೆ ಜೊತೆಯಲ್ಲಿ ಒಂದು ಕ್ಯಾನಿನಲ್ಲಿ ಐದು ಲೀಟರ್ ಮತ್ತೊಂದು ಬಾಟಲಿಯಲ್ಲಿ ಮೂರು ಲೀಟರ್ ಹಾಗೂ ದಾರಿ ಮಧ್ಯೆಯೆ ಒಂದು ಲೀಟರ್ ಪೆಟ್ರೋಲ್ ಖರೀದಿಸಿ ಬೈಂದೂರಿನ ಹೇನ್‍ಬೇರುವಿನ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಕಾರಿನ ಒಳಗೆ ಮತ್ತು ಹೊರಗೆ ಪೆಟ್ರೋಲ್ ಹಾಕಿ ಸುಟ್ಟಿದ್ದು ಬಳಿಕ ಮೊದಲೇ ನಿರ್ಧರಿಸಿದಂತೆ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಕಾರಿನಲ್ಲಿ ವಾಪಾಸು ಹೋಗಿದ್ದಾರೆ.

ಕೊಲೆ ಬಳಿಕ ಆತ್ಮಹತ್ಯೆಗೆ ಚಿಂತಿಸಿದ್ದ ಸದಾನಂದ:
ಪ್ರಕರಣದ ಬಳಿಕ ತಲೆಮರೆಸಿಕೊಳ್ಳುವ ಸಲುವಾಗಿ ಹಾಸನಕ್ಕೆ ತೆರಳುವ ಬಸ್ಸು ಹತ್ತಿದ್ದು ಮತ್ತೆ ಮನಸ್ಸು ಬದಲಿಸಿದ ಸದಾನಂದ ಶೇರೆಗಾರ್ ಆತನ ಗೆಳತಿ ಶಿಲ್ಪಾಳನ್ನು ಮನೆಗೆ ಬಿಟ್ಟು ತಾನು ಪಶ್ಚಾತ್ತಾಪದಿಂದ ಆತ್ಮಹತ್ಯೆ ಕೂಡ ಮಾಡಲು ಚಿಂತಿಸಿದ್ದನು ಎಂದು ತನಿಖೆಯ ವೇಳೆ ಹೇಳಿಕೊಂಡಿದ್ದಾನೆ ಎಂದು ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಕಾರ್ಕಳಕ್ಕೆ ಬೆಳಗ್ಗೆ ಬಸ್ಸ್‍ನಲ್ಲಿ ಬರುತ್ತಿದ್ದ ಸಂದರ್ಭದಲ್ಲೇ ಪೊಲೀಸರ ಬಲೆಗೆ ಸದಾನಂದ ಬಿದ್ದಿದ್ದು ಸೋದರ ಸಂಬಂಧಿಗಳನ್ನು ಕೂಡ ಪೆÇಲೀಸರು ಬಂಧಿಸಿದ್ದಾರೆ.

ಹತ್ಯೆಗೂ ಮೊದಲೇ ಸ್ಪಾಟ್ ನೋಡಲು ಬಂದಿದ್ದರು:
ಪ್ರಕರಣ ಪ್ರಮುಖ ಆರೋಪಿ ಸದಾನಂದ ಶೇರೆಗಾರ್ ಹಾಗೂ ಆತನ ಸೋದರ ಸಂಬಂಧಿಗಳಾದ ಸತೀಶ್ ದೇವಾಡಿಗ ಮತ್ತು ನಿತ್ಯಾನಂದ ದೇವಾಡಿಗ ಮೂವರು ಜೊತೆಯಾಗಿ ಹತ್ಯೆಗೂ ಮೂರು ದಿನಗಳ ಮೊದಲೇ ಹೇನ್‍ಬೇರು ನಿರ್ಜನ ಪ್ರದೇಶಕ್ಕೆ ಆಗಮಿಸಿ ಸ್ಥಳ ಗುರುತಿಸಿ ಹೋಗಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ:
ಹೇನ್‍ಬೇರು ನಿವಾಸಿ ಪ್ರಕಾಶ್ ದೇವಾಡಿಗ ಎಂಬವರು ಕಾರು ಪತ್ತೆಯಾಗಿರುವುದನ್ನು ಕಂಡು ಬೈಂದೂರು ಠಾಣೆಗೆ ದೂರು ನೀಡಿದ್ದು ಅವರ ದೂರಿನ ಅನ್ವಯ ತನಿಖೆ ಆರಂಭಿಸಿದ ಪೆÇಲೀಸರಿಗೆ ಮೊದಲು ಸುಟ್ಟ ಕಾರಿನಲ್ಲಿ ಪತ್ತೆಯಾದ ಮಾನವ ಅಸ್ಥಿಪಂಜರ ಮಹಿಳೆಯದ್ದು ಎಂಬ ಸಂಶಯ ಕಾಡಿತ್ತು. ಸುಟ್ಟು ಹೋದ ಕಾರಿನ ನಂಬರ್ ಪ್ಲೇಟ್ ಹಾಗೂ ಚಾಸಿಸ್ ನಂಬರ್ ಕೂಡ ಕಾಣದೆ ಇರುವುದು ತನಿಖೆಗೆ ಸಮಸ್ಯೆಯಾಗಿತ್ತು. ಆದರೆ ಫಾರೆನ್ಸಿಕ್ ತಜ್ಞರ ಸಹಾಯದಿಂದ ಚಾಸಿಸ್ ನಂಬರ್ ಅನ್ನು ಸ್ವಚ್ಚಗೊಳಿಸಿ ಕಾರು ಮಾಲಿಕನ ಪತ್ತೆ ಮಾಡಲಾಯಿತು.

ಘಟನೆಯ ಕುರಿತು ಮಾಧ‍್ಯಮಗಳಿಗೆ ಸವಿಸ್ತಾರ ಮಾಹಿತಿ ನೀಡಿದ ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ

ಕಾರು ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್ ಗೇಟ್‍ನಲ್ಲಿ ಉಡುಪಿಯಿಂದ ಬೈಂದೂರಿನತ್ತ ತೆರಳಿರುವುದು ಪತ್ತೆಯಾಗಿದ್ದು ಟೋಲ್‍ನಲ್ಲಿ ಮಹಿಳೆಯೊಬ್ಬರು ಇಳಿದು ಟೋಲ್ ನೀಡಿದ ದೃಶ್ಯ ಕೂಡ ಸೆರೆಯಾಗಿತ್ತು. ಈ ಎಲ್ಲಾ ದಾಖಲೆಗಳೊಂದಿಗೆ ಪ್ರಕರಣದ ಜಾಡು ಹಿಡಿದ ಪೆÇಲೀಸರ ತಂಡ ಕಾರ್ಕಳಕ್ಕೆ ತೆರಳಿ ಕೊನೆಗೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದೆ.

ಮೃತ ಆನಂದ ದೇವಾಡಿಗ ಮನೆಯಲ್ಲಿ ಏಕಾಂಗಿಯಾಗಿದ್ದು, ಶಿಲ್ಪಾಳ ಮನೆಯ ಬಳಿ ಕಟ್ಟಡ ಕೆಲಸಕ್ಕೆ ಬಂದಾಗ ಪರಿಚಯವಾಗಿದ್ದು ಹಲವಾರು ಬಾರಿ ಅವಳ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಇದರ ಲಾಭವನ್ನೇ ಪಡೆದು ಕೊನೆಗೆ ಸದಾನಂದ ಶೇರೆಗಾರ್‍ನನ್ನು ರಕ್ಷಿಸುವ ನಿಟ್ಟಿನಲ್ಲಿ ಆತನ ವಯಸ್ಸಿನವನೇ ಆದ ಆನಂದ ದೇವಾಡಿಗನನ್ನು ಕೊಂದು ಕಾರಿನಲ್ಲಿ ಸುಟ್ಟು ಹಾಕುವ ಪ್ಲ್ಯಾನ್ ರೂಪಿಸಿದ್ದರು ಎಂದು ಎಎಸ್ಪಿ ಹೇಳಿದ್ದಾರೆ.

ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಭೇದಿಸಿ ಆರೋಪಿಗಳನ್ನು ಪತ್ತೆ ಮಾಡಿದ ತಂಡಕ್ಕೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಐವತ್ತು ಸಾವಿರ ರೂಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.

 

ಹೇನ್ ಬೇರು ಕಾರು ಸುಟ್ಟ ಪ್ರಕರಣ – ಸಾಸ್ತಾನ ಟೋಲ್ ಗೇಟ್ ನಿಂದ ಬೈಂದೂರಿಗೆ ಕಾರು ತೆರಳಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ


Spread the love