
ಟೊಮ್ಯಾಟೊ ಗಿಡನಾಶ ಮಾಡಿದ ಕಿಡಿಗೇಡಿಗಳು
ಗುಂಡ್ಲುಪೇಟೆ(ಚಾಮರಾಜನಗರ): ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿ ವಿಕೃತಿ ಮೆರೆದ ಘಟನೆ ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದ ರೈತ ಮಂಜು ಇದರಿಂದ ಆಘಾತಗೊಂಡಿದ್ದಾರೆ.
ತಮಸಗೆ ಸೇರಿದ ಎರಡು ಎಕರೆಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಬಂಡವಾಳ ಹಾಕಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಟೊಮ್ಯಾಟೊ ಬೆಳೆಸಿದ್ದರು. ಇನ್ನೇನು ಫಸಲು ಕೈ ಸೇರುವ ಹಂತದಲ್ಲಿತ್ತು. ಆದರೆ ಕಿಡಿಗೇಡಿಗಳು ರಾತ್ರೋರಾತ್ರಿ ನುಗ್ಗಿ ಗಿಡಗಳನ್ನು ನಾಶ ಮಾಡಿದ್ದಾರೆ. ರೈತ ಎಂದಿನಂತೆ ಬೆಳಗ್ಗೆ ಹೊಲಕ್ಕೆ ಬಂದು ನೋಡಿದಾಗ ಮಂಜು ಅವರಿಗೆ ಅಘಾತ ಕಾದಿತ್ತು. ಆದಾಯ ಬರುವ ನಿರೀಕ್ಷೆಯಲ್ಲಿದ್ದ ಮಂಜುವಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೊ ನಾಶವಾಗಿದ್ದನ್ನು ಕಂಡು ಜಮೀನಲ್ಲಿ ಮಲಗಿ ಹೊರಳಾಡಿ ಮಂಜು ಕಣ್ಣೀರು ಹಾಕಿದ್ದಾರೆ.
ಹೊಟ್ಟೆ ಕಿಚ್ಚಿಗೆ ಈ ರೀತಿಯ ಮಣ್ಣು ತಿನ್ನುವ ಕೆಲಸ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಬುಡಸಮೇತ ಟೊಮ್ಯಾಟೊ ಗಿಡ ಕತ್ತರಿಸಿ ಹಾಕಿರುವ ದುಷ್ಕರ್ಮಿಗಳ ವಿರುದ್ಧ ರೈತ ಮಂಜು ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಶಾಸಕ ಗಣೇಶ್ ಪ್ರಸಾದ್ ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿ ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಕೊಡಿಸುವುದಾಗಿ ಹಾಗೂ ದುಷ್ಕೃತ್ಯ ನಡೆಸಿದ ವ್ಯಕ್ತಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿ ಟೊಮೋಟೊ ಬೆಳೆದ ರೈತನಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.