
ಟೊಮ್ಯಾಟೋ ಬೆಲೆ ಕುಸಿತ: ರಸ್ತೆಗೆ ಸುರಿದ ರೈತ
ರಾಮನಗರ: ಬೆಲೆ ಕುಸಿತದಿಂದ ಬೇಸತ್ತ ರೈತನೋರ್ವ ಟೊಮ್ಯಾಟೊವನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುರಿದು ಹೋಗಿರುವ ಘಟನೆ ನಡೆದಿದೆ.
ಬೆಲೆ ಕುಸಿತದಿಂದ ರೀಟೆಲ್ ವ್ಯಾಪಾರದಲ್ಲಿ ಒಂದು ಕೆ.ಜಿ.ಗುಣಮಟ್ಟದ ಟೊಮ್ಯಾಟೊ 8 ರಿಂದ 10 ರೂಗೆ ಮಾರಾಟವಾಗಿದೆ. ಆದರೆ ಕಷ್ಟಪಟ್ಟು ಬೆಳೆದ ರೈತರಿಗೆ ಒಂದು ಕೆ.ಜಿಗೆ ಸಿಗುವ ಅಸಲಿ ಬೆಲೆ ಕೇವಲ 2 ರಿಂದ 3 ರೂಪಾಯಿ ಮಾತ್ರ. ಒಂದು ಕ್ರೇಟ್ಗೆ 250 ರಿಂದ 300 ರೂಗಳಿಗೆ ಬಿಕರಿಯಾದಾಗ ಮಾತ್ರ ರೈತರು ಸ್ವಲ್ಪಮಟ್ಟಿನ ಲಾಭ ಕಾಣಲು ಸಾಧ್ಯ. ನಗರದ ಮಾರುಕಟ್ಟೆಯಲ್ಲಿ ಈಗ ಉತ್ತಮ ಗುಣಮಟ್ಟದ ಟೊಮ್ಯಾಟೊ 100 ರಿಂದ 150 ರೂಗಳಿಗೆ ಒಂದು ಕ್ರೇಟ್ ಲಭ್ಯವಾಗುತ್ತಿದೆ. ದಿನೇ ದಿನೇ ದರದಲ್ಲಿ ಕುಸಿತ ವಾಗುತ್ತಿರುವುದು ರೈತರನ್ನು ಕಂಗೆಡಿಸಿದೆ.
ಟೊಮ್ಯಾಟೊ ದರ ಬೇಸಿಗೆಯಲ್ಲಿ ಕುಸಿಯುವುದು ಮಳೆಗಾಲದಲ್ಲಿ ಏರಿಕೆ ಕಾಣುವುದು ಸಹಜ. ಅಲ್ಲದೆ ಶೂನ್ಯ ಮಾಸ ಇರುವುದರಿಂದ ಮದುವೆ ಮತ್ತಿತರ ಶುಭಕಾರ್ಯಗಳು ನಡೆಯದಿರುವುದು ಹಾಗೂ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಟೊಮ್ಯೋಟೊ ಬರುತ್ತಿರುವ ಕಾರಣ ಬೆಲೆ ಕುಸಿತವಾಗಿದೆ. ಪ್ರಸ್ತುತ ಸನ್ನಿವೇಶ ರೈತರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದ ಬೇಸತ್ತ ರೈತರು ಶ್ರಮವಹಿಸಿ ಬೆಳೆದ ಟನ್ಗಟ್ಟಲೆ ಟೊಮ್ಯಾಟೊವನ್ನು ರಸ್ತೆ ಬದಿ ಹಾಗೂ ಹಳ್ಳಕೊಳ್ಳಗಳಲ್ಲಿ ಸುರಿದು ಹೋಗುತ್ತಿರುವುದು ಕಂಡುಬಂದಿದೆ.