ಟೋಲ್‌ಗೇಟ್ ವಿವಾದ; ಪೊಲೀಸರ ವರ್ತನೆ ಖಂಡನೀಯ : ಮಾಜಿ ಶಾಸಕ ಜೆ.ಆರ್. ಲೋಬೊ

Spread the love

ಟೋಲ್‌ಗೇಟ್ ವಿವಾದ; ಪೊಲೀಸರ ವರ್ತನೆ ಖಂಡನೀಯ : ಮಾಜಿ ಶಾಸಕ ಜೆ.ಆರ್. ಲೋಬೊ
 

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟಗಾರರ ಮನೆಗೆ ಮಧ್ಯರಾತ್ರಿಯಲ್ಲಿ ಹತ್ತಾರು ಪೊಲೀಸರು ನುಗ್ಗಿ ನೊಟೀಸ್ ನೀಡುವುದು, ಅವರೆಲ್ಲರೂ ಅಧಿಕಾರಿಗಳ ಎದುರು ಹಾಜರಾಗಿ ತಲಾ 2 ಲಕ್ಷ ರೂ. ಬಾಂಡ್ ಬರೆದುಕೊಡಬೇಕು ಎಂದು ಬೆದರಿಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವವರನ್ನು ಪೊಲೀಸ್ ಇಲಾಖೆಯು ಕ್ರಿಮಿನಲ್‌ಗಳಂತೆ ಚಿತ್ರಿಸಿರುವುದು ಸರಿಯಲ್ಲ. ಇದು ರಾಜಕೀಯ ಹೋರಾಟವೂ ಅಲ್ಲ. ಜನಸಾಮಾನ್ಯರ ಸಮಸ್ಯೆಯ ವಿರುದ್ಧ ಜನರ ಧ್ವನಿ ಅಷ್ಟೇ. ಹೋರಾಟಗಾರರ ಮನೆಗೆ ಮಧ್ಯರಾತ್ರಿ ಪೊಲೀಸ್ ತಂಡವು ತೆರಳಿ ನೋಟಿಸ್ ನೀಡಿ ಭಯ ಹುಟ್ಟಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸರ ಕ್ರಮವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಿಗೆ ಮುಟ್ಟುತ್ತಿದೆ ಎಂಬ ಆತಂಕ ಕಾಡುತ್ತಿದೆ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.

ಇಂತಹ ವಿಷಯಕ್ಕೆ ಸಂಬಂಧಿಸಿ ರಾತ್ರಿ ವೇಳೆ ಪೋಲಿಸರು ಮನೆಗೆ ಹೋಗಬಾರದು ಎಂದು ಸುಪ್ರೀಂಕೋರ್ಟ್ ಪದೇ ಪದೇ ಹೇಳಿದೆ. ಹೀಗಿರುವಾಗ ಪೊಲೀಸ್ ಕಮಿಷನರ್ ಇಂತಹ ವರ್ತನೆಗೆ ಹೇಗೆ ಅವಕಾಶ ಕೊಡುತ್ತಿದ್ದಾರೆ ಎಂಬುದರ ಬಗ್ಗೆ ಸರಕಾರ ಉತ್ತರಿಸಬೇಕಾಗಿದೆ. ಅಲ್ಲದೆ ಹೋರಾಟಗಾರ್ತಿಯರ ಮನೆಗೆ ಮಧ್ಯರಾತ್ರಿ ತೆರಳಿದ ಪೊಲೀಸರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


Spread the love