ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ: ಪ್ರತಾಪಸಿಂಹ

Spread the love

ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ: ಪ್ರತಾಪಸಿಂಹ

ಮೈಸೂರು: ಮೈಸೂರು ಪ್ರವೇಶ ದ್ವಾರವಾದ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಬಳಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ವಾಹನ ದಟ್ಟಣೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಗುರುವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಆರುಪಥದ ಎಕ್ಸ್‌ಪ್ರೆಸ್ ವೇ ಹಾಗೂ ನಾಲ್ಕು ಪಥದ ಸರ್ವಿಸ್ ರಸ್ತೆಗಳನ್ನು ಮಾಡಿದ ನಂತರವೂ ಕುಂಬಳಗೋಡು ಪ್ಲೈಓವರ್ ಇಳಿದು ನೈಸ್ ರಸ್ತೆಯಿಂದ ಎಡಕ್ಕೆ ತಿರುಗಿ ಬೆಂಗಳೂರಿಗೆ ಹೋಗುವಾಗ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದು ನಾಗರಿಕರು ಎರಡು ತಿಂಗಳ ಹಿಂದೆ ತಿಳಿಸಿದ್ದರು. ಕೂಡಲೇ ಸರ್ವಿಸ್ ರೋಡ್ ಹಾಗೂ ಒಳಚರಂಡಿ ಕೆಲಸಗಳನ್ನು ಮುಗಿಸಿದ ಮೇಲೆ ಈ ಸಮಸ್ಯೆಗೆ ಪರಿಹಾರ ದೊರೆಕಿತು. ಇದೀಗ ಮಣಿಪಾಲ ಆಸ್ಪತ್ರೆ ಸಿಗ್ನಲ್ ಬಳಿಯೂ ಇದೇ ಸಮಸ್ಯೆ ಉದ್ಘವವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ ಎಂದು ಮಾಹಿತಿ ನೀಡಿದರು.

ಸಿದ್ದಾರ್ಥನಗರ, ಚಾಮುಂಡಿಬೆಟ್ಟ, ತಿ.ನರಸೀಪುರ, ನಂಜನಗೂಡು, ಊಟಿಗೆ ಹೋಗುವವರಿಗೆ ಫ್ರೀ ಲೆಫ್ಟ್ ಟರ್ನ್ ನೀಡಲಾಗುವುದು. ಎಲ್ಲರೂ ಅದೇ ಮಾರ್ಗದಲ್ಲಿ ಹೋಗಬೇಕು. ಹೂಟಗಳ್ಳಿ, ವಿಜಯನಗರ ಹಾಗೂ ಕೊಡಗಿನಿಂದ ಬರುವವರಿಗೂ ಫ್ರೀ ಲೆಫ್ಟ್ ಟರ್ನ್ ನೀಡಲಾಗುವುದು. ಇದಕ್ಕಾಗಿ ಮೇ ೨೬ರಿಂದಲೇ ಕಾಮಗಾರಿ ಶುರು ಮಾಡಲಾಗುವುದು. ಇದರಿಂದ ಸವಾರರು ಮಣಿಪಾಲ್ ಆಸ್ಪತ್ರೆ ಸಿಗ್ನಲ್‌ವರೆಗೂ ಬರುವುದು ತಪ್ಪುತ್ತದೆ. ಶೇ.೯೦ರಷ್ಟು ಟ್ರಾಫಿಕ್ ಸಮಸ್ಯೆ ತಪ್ಪುತ್ತದೆ. ಇದು ಕೇವಲ ತಾತ್ಕಾಲಿಕ ಪರಿಹಾರ ಅಷ್ಟೇ ಎಂದು ತಿಳಿಸಿದರು.

ಬೆಂಗಳೂರಿನಿಂದ ಬರುವ ವಾಹನಗಳು ರಿಂಗ್ ರಸ್ತೆಯ ಮಣಿಪಾಲ್ ಸಿಗ್ನಲ್ ಬಳಿ ಟ್ರಾಫಿಕ್ ಜಾಮ್‌ಗೆ ಸಿಲುಕುತ್ತಿರುವುದು ಗಮನಕ್ಕೆ ಬಂದಿದೆ. ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಸವಾರರಿಗೆ ಅನುಕೂಲವಾಗಲಿ ಎಂದು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದ್ದು, ಪ್ಲೈಓವರ್ ನಿರ್ಮಾಣವಾದ ಮೇಲೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಲಿದೆ ಎಂದರು.

ಎಸಿಪಿ ಪರಶುರಾಮಪ್ಪ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.


Spread the love

Leave a Reply

Please enter your comment!
Please enter your name here