ಟ್ರಾಫಿಕ್ ಸಿಗ್ನಲ್ ವಿಚಾರದಲ್ಲಿ ಮಾಜಿ ಶಾಸಕರ ರಾಜಕೀಯ ಪ್ರೇರಿತ ಆರೋಪ ದುರದೃಷ್ಟಕರ : ಪ್ರಭಾಕರ ಪೂಜಾರಿ
ಉಡುಪಿ: ನಗರ ಭಾಗದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ತೆರವುಗೊಳಿಸಿ ಪೊಲೀಸ್ ಇಲಾಖೆಯ ಸೂಚನೆ ಹಾಗೂ ಮಾನದಂಡದಂತೆ ಹೊಸದಾಗಿ ಅಳವಡಿಸುತ್ತಿರುವ ಟ್ರಾಫಿಕ್ ಸಿಗ್ನಲ್ ಬಗ್ಗೆ ಮಾಜಿ ಶಾಸಕ ರಘುಪತಿ ಭಟ್ ಅವರು ನಗರಸಭೆ ವಿರುದ್ಧ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿರುವುದು ದುರದೃಷ್ಟಕರ ಎಂದು ಉಡುಪಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಉಡುಪಿ ನಗರದ ವಿವಿಧ ಭಾಗಗಳಲ್ಲಿ ತರಾತುರಿಯಲ್ಲಿ ತೀರಾ ಅವೈಜ್ಞಾನಿಕವಾಗಿ ರಸ್ತೆಯ ಬದಿಯಲ್ಲೇ ಬೃಹತ್ ಗಾತ್ರದ ಕಂಬಗಳನ್ನು ಅಳವಡಿಸಿರುವ ಕ್ರಮದಿಂದ ವಾಹನಗಳ ಸುಗಮ ಸಂಚಾರ ಹಾಗೂ ಪಾದಾಚಾರಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರು ಹಾಗೂ ಉದಯವಾಣಿ ಸಹಿತ ಹಲವಾರು ದಿನಪತ್ರಿಕೆಗಳು ಈ ಬಗ್ಗೆ ವರದಿ ಮಾಡಿರುವುದು ವಾಸ್ತವ. ಈ ಹಿನ್ನೆಲೆಯಲ್ಲಿ ಈ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ತೆರವುಗೊಳಿಸಿ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಹೊಸ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೊಳಿಸುವ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.
ಉಡುಪಿ ನಗರದ ಡಯಾನ ವೃತ್ತ, ತ್ರಿವೇಣಿ ವೃತ್ತ ಸಹಿತ ತೀರಾ ಕಿರಿದಾದ ವಿವಿಧ ರಸ್ತೆಯಲ್ಲೇ ಈ ಹಿಂದೆ ಬೃಹತ್ ಕಂಬಗಳನ್ನು ಅಳವಡಿಸಿ ಹಲವಾರು ಅಪಘಾತಗಳು ಸಂಭವಿಸಿದ್ದು, ಅಂಬಾಗಿಲು ಹಾಗೂ ಬಲಾಯಿಪಾದೆ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ, ಹೆದ್ದಾರಿ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರವನ್ನು ಪಡೆಯದೆ ಕಂಬಗಳನ್ನು ಅಳವಡಿಕೆ ಮಾಡಿರುವ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಬಂದಿವೆ.
ಉಡುಪಿ ನಗರದ ಜನತೆಗೆ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿಯೇ ಟೆಂಡರ್ ಪ್ರಕ್ರಿಯೆ ನಡೆಸಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ನಗರಸಭೆ ಮುಂದಾಗಿದ್ದು, ಇದರಲ್ಲಿ ಯಾವುದೇ ದುಂದು ವೆಚ್ಚ ಮಾಡಿಲ್ಲ ಎಂಬುದನ್ನು ಮಾಜಿ ಶಾಸಕರು ಮರೆಯಬಾರದು ಎಂದು ಅವರು ತಿಳಿಸಿದ್ದಾರೆ.
ದೇಶದ ಯಾವುದೇ ನಗರಗಳಲ್ಲಿ ಇಂತಹ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಿರುವ ಉದಾಹರಣೆಗಳಿಲ್ಲ. ಇದನ್ನು ಕೇವಲ ಜಾಹೀರಾತು ಉದ್ದೇಶದಿಂದ ಮಾಡಿದಂತಿದೆ. ಕೇವಲ ರಾಜಕೀಯ ಕಾರಣಕ್ಕಾಗಿ ಬಂಡವಾಳಶಾಹಿ ಕಂಪೆನಿಯ ಪ್ರತಿನಿಧಿಯಂತೆ ಆರೋಪ ಮಾಡುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ.
ಈ ಬಗ್ಗೆ ಯಾವುದೇ ಲೋಪಗಳಿದ್ದಲ್ಲಿ ಸಂಬಂಧಿತ ಕಂಪೆನಿ ನೇರವಾಗಿ ನಗರಸಭೆಗೆ ಮನವಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದು. ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಯಾವುದೇ ಚಕಾರ ಎತ್ತದೇ ಇದೀಗ ನಗರಸಭೆಯಲ್ಲಿ ನಗರಸಭಾ ಆಡಳಿತಾವಧಿ ಮುಗಿದ ತಕ್ಷಣ ಏಕಾಏಕಿಯಾಗಿ ಈ ರೀತಿಯ ಆರೋಪ ಮಾಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಮಾಜಿ ಶಾಸಕರ ಪ್ರಯತ್ನ ದುರದೃಷ್ಟಕರ ಎಂದು ಪ್ರಭಾಕರ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
