
ಡಿಕೆ ಶಿವಕುಮಾರ್ ನಾಮಪತ್ರ ಅಂಗೀಕಾರ: ಕೆಪಿಸಿಸಿ ಅಧ್ಯಕ್ಷರಿಗೆ ಬಿಗ್ ರಿಲೀಫ್
ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಪುರ ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ.
ನಾಮಪತ್ರದಲ್ಲಿ ಯಾವುದೇ ಲೋಪದೋಷಗಳಿಲ್ಲ. ಎಲ್ಲವೂ ಕ್ರಮಬದ್ಧವಾಗಿದೆ. ಹೀಗಾಗಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ನಾಮಪತ್ರವನ್ನು ಕನಕಪುರ ಚುನಾವಣಾಧಿಕಾರಿ ಮಾನ್ಯ ಮಾಡಿದ್ದಾರೆ. ಇದರಿಂದ ಆತಂಕದಲ್ಲಿದ್ದ ಡಿಕೆ ಶಿವಕುಮಾರ್ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇದರೊಂದಿಗೆ ಡಿಕೆ ಶಿವಕುಮಾರ್ ಆರಂಕ ದೂರವಾಗಿದ್ದು, ಕನಕಪುರ ಕ್ಷೇತ್ರದಲ್ಲಿ ಬಿಜೆಪಿಯ ಆರ್.ಅಶೋಕ್ ಹಾಗೂ ಡಿಕೆ ಶಿವಕುಮಾರ್ ನಡುವೆ ಹಣಾಹಣಿ ಏರ್ಪಡಲಿದೆ.
ಏಪ್ರಿಲ್ 17ರಂದು ರಾಮನಗರ ಜಿಲ್ಲೆ ಕನಕಪುರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದರು. ಆದ್ರೆ, ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿ ಡಿಕೆ ಶಿವಕುಮಾರ್ ಇದ್ದರು. ಆಸ್ತಿ ಹಾಗೂ ತೆರಿಗೆ ಲೆಕ್ಕಾಚಾರ ಸಮಸ್ಯೆಯಿಂದಾಗಿ ನಾಮಪತ್ರ ರಿಜೆಕ್ಟ್ ಮಾಡುತ್ತಾರೆ ಎನ್ನುವ ಭಯದಲ್ಲಿ ಡಿಕೆ ಶಿವಕುಮಾರ್ ಅವರಲ್ಲಿತ್ತು. ಮುಂಜಾಗ್ರತಾವಾಗಿ ತಮ್ಮ ಸಹೋದರ ಡಿಕೆ ಸುರೇಶ್ ಅವರಿಂದ ಸಹ ಕನಕಪುರಕ್ಕೆ ಕೊನೆ ಗಳಿಗೆಯಲ್ಲಿ ನಾಮಪತ್ರ ಹಾಕಿಸಿದ್ದರು
ಐಟಿ ಅಧಿಕಾರಿಗಳು ಸಹ ನಾಲ್ಕು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಅಲ್ಲದೆ ಏಪ್ರಿಲ್ 17 ರಂದು ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಐಟಿ ಅಧಿಕಾರಿಗಳು ಕನಕಪುರಕ್ಕೆ ಬಂದು ಆಸ್ತಿ ವಿವರದ ಮಾಹಿತಿ ಪಡೆದಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಡಿಕೆ ಶಿವಕುಮಾರ್ ತಮ್ಮ ನಾಮಪತ್ರ ತಿರಸ್ಕೃತವಾಗಬಹುದು ಎನ್ನುವ ಆತಂಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಸಹೋದರ ಕಣದಲ್ಲಿ ಇರಲಿ ಎಂಬ ಲೆಕ್ಕಾಚಾರಿಂದ ಡಿಕೆ ಸುರೇಶ್ ಅವರಿಂದ ನಾಮಿನೇಷನ್ ಫೈಲ್ ಮಾಡಿಸಿದ್ದರು.