“ಡಿಯರ್ ಬಿಗ್ ಟಿಕೆಟ್” ವಿಜೇತರಾದ ಹನೀಫ್ ಪುತ್ತೂರು
ಯುಎಇಯ ಅಬುದಾಬಿ ಡ್ಯೂಟಿ ಫ್ರೀ, ಏಷ್ಯಾನೆಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ “ಡಿಯರ್ ಬಿಗ್ ಟಿಕೆಟ್” ಸ್ಪರ್ಧೆಯಲ್ಲಿ ಪುತ್ತೂರು ಸಮೀಪದ ಆರ್ಯಾಪು ಗ್ರಾಮದ ಬಲ್ಲೇರಿ ಅಬ್ಬಾಸ್ ಹಾಜಿ ಪುತ್ರ ಮಹಮ್ಮದ್ ಹನೀಫ್ ವಿಜೇತರಾಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಸರು ತಂದಿದ್ದಾರೆ.
ಹನೀಫ್ ಪುತ್ತೂರು ಅವರು ದುಬೈ ಯುನಿವರ್ಸಿಟಿಯ ಮಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್ ಲ್ಯಾಬ್’ನಲ್ಲಿ ಸಾಫ್ಟ್’ವೇರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದು, ಮಂಗಳೂರು ಎಂ.ಫ್ರೆಂಡ್ಸ್ ಟ್ರಸ್ಟ್’ನ ಯುಎಇ ಪ್ರಾಂತ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಿಯರ್ ಬಿಗ್ ಟಿಕೆಟ್ ಸಂಸ್ಥೆಯು ಕಳೆದ ಸೆಪ್ಟಂಬರ್ ತಿಂಗಳಲ್ಲಿ “ನಿಮ್ಮ ಕನಸು ನನಸು ಮಾಡುತ್ತೇವೆ.” ಎಂಬ ಸ್ಪರ್ಧೆ ಏರ್ಪಡಿಸಿತು. ಹನೀಫ್ ಅವರು ತನ್ನೂರಿನ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಬಸ್ ಪ್ರಾರಂಭಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ಧೆಗೆ ಅರ್ಜಿ ಹಾಕಿದರು. ಒಂದು ಮೊಬೈಲ್ ಬಸ್’ಗೆ 2 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಟೆಕ್ನಾಲಜಿಯಲ್ಲಿ ನಿರ್ಮಿಸಿ ಶಾಲೆಗಳಿಗೆ ತೆರಳಿ ಕಂಪ್ಯೂಟರ್ ಬೋಧಿಸುವ ಕನಸನ್ನು ಬಿಚ್ಚಿಟ್ಟರು.
ವಿವಿಧ ಕನಸುಗಳನ್ನು ಹೊತ್ತು ಯುಎಇಯಲ್ಲಿ ನೆಲೆಸಿರುವ ವಿವಿಧ ರಾಷ್ಟ್ರಗಳ ಸುಮಾರು 8,000 ಮಂದಿ ಸ್ಪರ್ಧೆಗಿಳಿದರು. ಅದರಲ್ಲಿ ಹೃದಯ ತಟ್ಟುವ ಯೋಜನೆ, ಕನಸುಗಳನ್ನು ಹೊಂದಿರುವ ಟಾಪ್ 20 ಮಂದಿಯನ್ನು “ಡಿಯರ್ ಬಿಗ್ ಟಿಕೆಟ್” ಸಂಸ್ಥೆ ಆಯ್ಕೆ ಮಾಡಿ ತನ್ನ ವೆಬ್’ಸೈಟ್ ಮೂಲಕ ಸಾರ್ವಜನಿಕ ಆನ್’ಲೈನ್ ಮತದಾನಕ್ಕೆ ಹಾಕಿತು. ಟಾಪ್ 20 ರಲ್ಲಿ ಹನೀಫ್ ಪುತ್ತೂರು ಕೂಡಾ ಸ್ಥಾನ ಪಡೆದಿದ್ದರು. 1,30,000 ಮಂದಿ ಆನ್’ಲೈನ್ ಓಟ್ ಮಾಡಿದ್ದು, ಟಾಪ್ 5 ವಿಜೇತರನ್ನು ಸಂಸ್ಥೆಯು ಆಯ್ಕೆ ಮಾಡಿ ಆ 5 ಜನರ ಕನಸನ್ನು ಈಡೇರಿಸುವ ಭರವಸೆ ನೀಡಿದೆ. 5 ಜನ ವಿಜೇತರಲ್ಲಿ ಭಾರತದ ಹನೀಫ್ ಪುತ್ತೂರು ಕೂಡಾ ಇದ್ದಾರೆ. ಅವರಿಗೆ ಅತ್ಯಧಿಕ ಆನ್’ಲೈನ್ ಮತಗಳು ಸಿಕ್ಕಿವೆ ಹಾಗೂ ಅವರ ಕನಸಿನ ಯೋಜನೆ ಸಂಸ್ಥೆಗೆ ಹಿಡಿಸಿವೆ. ಡಿಯರ್ ಬಿಗ್ ಟಿಕೆಟ್’ನ ನಿರ್ದೇಶಕರಲ್ಲೊಬ್ಬರಾದ ರಿಚರ್ಡ್ ಅವರು ಹನೀಫ್ ಅವರ ಫಲಿತಾಂಶವನ್ನು ಪ್ರಕಟಿಸಿದರು. ಅವರ ಯೋಜನೆಗೆ ಎಷ್ಟು ಮೊತ್ತ “ಡಿಯರ್ ಬಿಗ್ ಟಿಕೆಟ್” ನೀಡುತ್ತದೆ ಎನ್ನುವುದು ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಒಂದು ವಾರದಲ್ಲಿ ಎಲ್ಲವೂ ತಿಳಿಯುವ ನಿರೀಕ್ಷೆಯಿದೆ.
ಟಾಪ್ 5 ರಲ್ಲಿ ಭಾರತದ ಹನೀಫ್ ಪುತ್ತೂರು ಅಲ್ಲದೇ ಅಬುದಾಬಿಯಲ್ಲಿರುವ ಫಿಲಿಪ್ಪೀನ್ಸ್’ನ ಆಲನ್ ರೇಕ್ಸಿ ಫೋರ್ಟಸ್, ದುಬೈಯಲ್ಲಿರುವ ಭಾರತೀಯಳಾದ ಸುವರ್ಣ ಸನಲ್ ಕುಮಾರ್, ದುಬೈಯಲ್ಲಿರುವ ಫಿಲಿಪ್ಪೀನ್ಸ್’ನ ರಾವುಲ್ ಗಾರ್ಸಿಯಾ, ಶಾರ್ಜಾದಲ್ಲಿರುವ ಕೇನ್ಯಾದ ಸಾರಾ ಖಾಲಿದ್ ಅವರು “ಡಿಯರ್ ಬಿಗ್ ಟಿಕೆಟ್” ವಿಜೇತರಾಗಿದ್ದಾರೆ.
-ರಶೀದ್ ವಿಟ್ಲ.