ಡಿ.15ರಂದು ರಾಮನಗರಕ್ಕೆ ಪಂಚರತ್ನ ರಥಯಾತ್ರೆ ಆಗಮನ

Spread the love

ಡಿ.15ರಂದು ರಾಮನಗರಕ್ಕೆ ಪಂಚರತ್ನ ರಥಯಾತ್ರೆ ಆಗಮನ

ರಾಮನಗರ: ಜೆಡಿಎಸ್ ವತಿಯಿಂದ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಡಿಸೆಂಬರ್ 15ರಂದು ರಾಮನಗರ ಜಿಲ್ಲೆಗೆ ಆಗಮಿಸಲಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಲೂಕಿನ ದೊಡ್ಡಮಣ್ಣುಗುಡ್ಡೆದೊಡ್ಡಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಗಡಿಯಲ್ಲಿ 15ರಂದು ಯಾತ್ರೆ ನಡೆಸಿ 16 ರಂದು ರಾಮನಗರಕ್ಕೆ ಬರಲಿದೆ. ಅಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿಯೇ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಡಿಸೆಂಬರ್ 16-17 ರಂದು ರಾಮನಗರ ತಾಲೂಕಿನಲ್ಲಿ ಯಾತ್ರೆ ಸಂಚರಿಸಿ, ಡಿಸೆಂಬರ್ 18 ಮತ್ತು 19 ರಂದು ಕನಕಪುರ ಹಾಗೂ ಡಿಸೆಂಬರ್ 19 ಮತ್ತು 20ರಂದು ಚನ್ನಪಟ್ಟಣದಲ್ಲಿ ಯಾತ್ರೆ ನಡೆಯಲಿದೆ ಎಂದು ವಿವರ ನೀಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಿದ ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಗಳಲ್ಲಿ ಅಬ್ಬರದಿಂದ ಯಾತ್ರೆ ಮುಗಿದಿದೆ. ತುಮಕೂರಿನಲ್ಲಿ ಯಾತ್ರೆ ಪ್ರಾರಂಭವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಭಾರಿಜನ ಬೆಂಬಲ ವ್ಯಕ್ತವಾಗಿದೆ ಎಂದರು.

ಇದೇ ಸಂಧರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸ್ಪರ್ಧಿಗಳು ನಮ್ಮ ಮುಂದಿನ ಶಾಸಕಿ ಅನಿತಾಕುಮಾರಸ್ವಾಮಿ, ಮುಂದಿನ 2023ರ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬ ಬರಹದ ಅಡಿಯಲ್ಲಿ ವಿವಿಧ ಮಾದರಿ ರಂಗೋಲಿ ಹಾಕಿ ತೆನೆ ಹೊತ್ತ ರೈತ ಮಹಿಳೆ ರಂಗೋಲಿಗಳ ಚಿತ್ತಾರ ಮೂಡಿಸಿದ್ದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ 20ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರಿದರು. ಮುಖಂಡರಾದ ಬಿ.ಉಮೇಶ್, ಪಾಂಡುರಂಗ, ಎಂ.ವಿ.ಶಿವರಾಜು, ಟಿ.ಆನಂದ, ರಮೇಶ್, ತಿಮ್ಮಯ್ಯ, ಪೆದ್ದವಾಡ ವೆಂಕಟಸ್ವಾಮಿ, ಜಯಮ್ಮ ವೆಂಕಟಸ್ವಾಮಿ, ನಾಗರಾಜು, ಅಶೋಕ್ ಮತ್ತಿತರರು ಹಾಜರಿದ್ದರು.


Spread the love