
ಡಿ. 17 ರಂದು ದ.ಕ. ಜಿಲ್ಲಾದ್ಯಂತ ಶಾಲಾ-ಕಾಲೇಜು ಬಂದ್: ಸವಾದ್ ಸುಳ್ಯ
ಮಂಗಳೂರು: ವಿದ್ಯಾರ್ಥಿ ವೇತನ, ಪದವಿ ಫಲಿತಾಂಶ ಪ್ರಕಟ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಎನ್ಎಸ್ಯುಐ ಡಿ.17ರಂದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದೆ ಎಂದು ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದೆ. ಹಲವು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನೇ ನಂಬಿ ವಿದ್ಯಾರ್ಜನೆ ಮಾಡುತ್ತಾರೆ. ಆದ್ದರಿಂದ ತಕ್ಷಣ ವಿದ್ಯಾರ್ಥಿ ವೇತನ ನೀಡಬೇಕು ಎಂದು ಆಗ್ರಹಿಸಿದರು. ಅದೇ ರೀತಿ ಪದವಿ ಪರೀಕ್ಷೆಗಳು ಮುಗಿದು ಆರೇಳು ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದಾಗಿ ಮುಂದಿನ ಸೆಮಿಸ್ಟರ್ ಓದಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸರಕಾರ ಘೋಷಿಸಿರುವ ಉಚಿತ ಬಸ್ ಪಾಸ್ ಇನ್ನೂ ಜಾರಿಯಾಗಿಲ್ಲ. ಇದೀಗ ಅವೈಜ್ಞಾನಿಕವಾಗಿ ಎನ್ಇಪಿಯನ್ನು ಜಾರಿಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಾಬೆ, ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್, ಜಿಲ್ಲಾ ಉಪಾಧ್ಯಕ್ಷ ಶ್ವಾನ್ ಸಿರಿ, ಮೂಡಬಿದ್ರೆ ವಿಧಾನ ಸಭಾ ಅಧ್ಯಕ್ಷ ಸೃಜನ್, ಯುನಿವರ್ಸಿಟಿ ಅಧ್ಯಕ್ಷ ಸಿರಾಜ್ ಗುದ್ರು, ಮುಖಂಡರಾದ ನಜೀಬ್, ಸಾಹಿಲ್, ಶ್ರೇಯಸ್, ಸಫ್ವಾನ್, ಲಸ್ಟರ್, ಆತೂಫ್, ಅಫ್ತಾಬ್, ಅಂಕಿತ್ ಉಪಸ್ಥಿತರಿದ್ದರು.