ಡಿ.20ರಿಂದ ಜ.4ರವರೆಗೆ ʼಕರಾವಳಿ ಉತ್ಸವʼ: ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಮಂಗಳೂರು: ದ.ಕ. ಜಿಲ್ಲಾಡಳಿತವು, ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ, ಸಾಂಸ್ಕೃತಿಕ, ಕ್ರೀಡಾ ಮತ್ತು ಮನರಂಜನಾ ಚಟುವಟಿಕೆಗಳ ಸಮಾಗಮವಾದ ‘ಕರಾವಳಿ ಉತ್ಸವ 2025-26’ ಅನ್ನು ಡಿ.20ರಿಂದ ಜ.4ರವರೆಗೆ ಆಯೋಜಿಸಲು ಸಜ್ಜಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರಾವಳಿ ಉತ್ಸವ ಮೈದಾನ, ಕದ್ರಿ ಪಾರ್ಕ್ ಮತ್ತು ನಗರದ ಕಡಲತೀರಗಳಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಅವರು ಹೇಳಿದರು.
ಡಿ.20ರಂದು ಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ನ ಶಾಸಕರು, ವಿವಿಧ ಅಕಾಡಮಿ, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ವಿವರಿಸಿದರು.
ಮನರಂಜನಾ ಚಟುವಟಿಕೆಗಳು: ಕರಾವಳಿ ಉತ್ಸವ ಮೈದಾನದಲ್ಲಿ ವಿವಿಧ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಸಾರ್ವಜನಿಕರಿಗಾಗಿ ಲಭ್ಯವಿರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.20ರಿಂದ ಜ.4ರವರೆಗೆ ಪ್ರತೀ ಶನಿವಾರ ಮತ್ತು ರವಿವಾರ ಕರಾವಳಿ ಉತ್ಸವ ಮೈದಾನದ ವೇದಿಕೆಯಲ್ಲಿ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಸಂಗೀತ ಸಂಭ್ರಮ: ಜ.3 ಮತ್ತು 4ರಂದು ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಕಡಲತೀರಗಳಲ್ಲಿ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಖ್ಯಾತ ಕಲಾವಿದರಿಂದ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಯಲಿದೆ.
ಜನವರಿ-ಫೆಬ್ರವರಿ ವಿಶೇಷ ಆಕರ್ಷಣೆಗಳು: ಉತ್ಸವದ ಮುಂದುವರಿದ ಭಾಗವಾಗಿ, ಜನವರಿ ಮತ್ತು ಫೆಬ್ರವರಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿಸಿ ದರ್ಶನ್ ಎಚ್.ವಿ. ತಿಳಿಸಿದರು.
ಜ.9ರಿಂದ 11ರವರೆಗೆ ಕಲೆ ಮತ್ತು ಸಂಸ್ಕೃತಿಯ ಅಂಗವಾಗಿ ಕದ್ರಿ ಪಾರ್ಕ್ ರಸ್ತೆಯಲ್ಲಿ ಶರಧಿ ಪ್ರತಿಷ್ಠಾನದ ಸಹಯೋಗದೊಂದಿಗೆ ಚಿತ್ರ ಶಿಲ್ಪನೃತ್ಯ ಮೇಳ ‘ಕಲಾ ಪರ್ಬ’ ನಡೆಯಲಿದೆ. ಕದ್ರಿ ಪಾರ್ಕ್ (ತೋಟಗಾರಿಕೆ ಇಲಾಖೆ) ವತಿಯಿಂದ ಜ.26ರಂದು ಫಲಪುಷ್ಪಪ್ರದರ್ಶನ ನಡೆಯಲಿದೆ. ಕ್ರೀಡೆ ಸಂಬಂಧಿಸಿದಂತೆ ಟ್ರಯತ್ಲಾನ್ ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್ (ತಪಸ್ಯಾ ಫೌಂಡೇಶನ್ ಸಹಯೋಗ)ನಲ್ಲಿ ನಡೆಯಲಿದೆ. ಜ.17, 18ರಂದು ತಣ್ಣೀರು ಬಾವಿ ಬೀಚ್ನಲ್ಲಿ ಅಂತರ್ರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಜ.23ರಿಂದ 25ರವರೆಗೆ ಪ್ರಮುಖ ಬೀಚ್ಗಳಲ್ಲಿ ಬೀಚ್ ಉತ್ಸವ ನಡೆಯಲಿದೆ. ಜ.30 ಮತ್ತು 31ರಂದು ಕದ್ರಿ ಪಾರ್ಕ್ ರೋಡ್ ಬಳಿ ಫುಡ್ ಸ್ಟ್ರೀಟ್ನಡೆಯಲಿದೆ. ಜನವರಿ ಕೊನೆಯ ವಾರ ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಮೇಳ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿದರು.
