ಡಿ. 4: ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ – ಐವನ್ ಡಿಸೋಜಾ

Spread the love

ಡಿ. 4: ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ – ಐವನ್ ಡಿಸೋಜಾ

ಮಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ನೇಮಕಗೊಳಿಸಲು ಒತ್ತಾಯಿಸಿ ಡಿಸೆಂಬರ್ 4 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಅವರು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸ ಮಾತನಾಡಿ 2019-20ನೇ ಸಾಲಿನ ಅಯವ್ಯಯದಲ್ಲಿ ಹೊಸದಾಗಿ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಮೂಲಕ ಕ್ರೈಸ್ತ ಸಮುದಾಯದ ಸಮಗ್ರದ ಅಭಿವೃದ್ಧಿ ಕಾರ್ಯಕ್ರಮಗಳನ್ನು 200ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಅಂದಿನ ಮುಖ್ಯ ಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರು ಘೋಷಿಸಿದರು ಮತ್ತು ಅದರಂತೆ 200ಕೋಟಿ ರೂಪಾಯಿಗಳಲ್ಲಿ, 75ಕೋಟಿ ರೂಪಾಯಿಗಳನ್ನು ನಿಗಮದ ಸ್ಥಾಪನೆಗಾಗಿ ಮೀಸಲಿಡಲಾಗಿತ್ತು. ತದನಂತರ ಆಡಳಿತ ಇಲಾಖೆಯು ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಸ್ಥಾಪನೆಯ ಕುರಿತು ಕರಡು ತಯಾರಿಸಿ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವ ಷರತ್ತುಗೊಳಪಟ್ಟು, ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಅನುಮೋದನೆ ನೀಡಿರುತ್ತಾರೆ ಮತ್ತು ಇದನ್ನು ಸರಕಾರದ ಪ್ರಧಾನ ಕಾರ್ಯದರ್ಶಿಯವರಿಂದ ಅನುಮೋದಿಸಲ್ಪಟ್ಟಿರುತ್ತದೆ.

ತದನಂತರ ಸದ್ರಿ ಪ್ರಸ್ತಾವನೆಯು ಜೂನ್ 16 ರಂದು ಮುಖ್ಯ ಮಂತ್ರಿಯವರ ಆದೇಶದ ಮೇರೆಗೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಸುಮಾರು 30ಲಕ್ಷ ಜನಸಂಖ್ಯೆ ಇರುವ ಕ್ರೈಸ್ತ ಸಮುದಾಯವು, ರಾಜ್ಯದ 27 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅದರಲ್ಲೂ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಅತ್ಯಂತ ಬಡವರು ಆರ್ಥಿಕವಾಗಿ ಹಿಂದುಳಿದವರು, ಶೈಕ್ಷಣಿಕವಾಗಿ ಹಿಂದುಳಿದವರು ಕೂಲಿಕಾರ್ಮಿಕರಾಗಿದ್ದಾರೆ. ಮನೆಗಳಿಲ್ಲದೆ ಟೆಂಟುಗಳಲ್ಲಿ ವಾಸವಾಗಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಕೃಷಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರು, ಉಡುಪಿ, ಚಿಕ್ಕಮಂಗಳೂರು, ಮಡಿಕೇರಿ, ಶಿವಮೊಗ್ಗ ಮತ್ತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ದಲಿತ ಕ್ರೈಸ್ತರು ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಮುದಾಯದ ಬೆಳವಣಿಗೆಗಾಗಿ ಕಳೆದ 5 ವರ್ಷಗಳಿಂದ ಸತತವಾಗಿ ಹೋರಾಟ ನಡೆಸಿ, ಕ್ರೈಸ್ತರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಘೋಷಿಸಲಾಗಿದ್ದು, ಈ ಮೂಲಕ ಸಮುದಾಯದ ಸ್ವಉದ್ಯೋಗ, ಶೈಕ್ಷಣಿಕ ಮತ್ತು ಜೀವನ ಮಟ್ಟದ ಸುಧಾರಣೆಗಾಗಿ ಸತತ ಒತ್ತಾಯದ ಮೂಲಕ ನಿಗಮವನ್ನು ಘೋಷಿಸಲಾಗಿತ್ತು. ಹಣ ಬಿಡುಗಡೆಯೂ ಆಗಿತ್ತು. ಆದರೆ, ಮೇಲಿನ ಆದೇಶದ ಮೂಲಕ ನಿಗಮವನ್ನು ರದ್ದು ಪಡಿಸಿರುವುದು ಅತ್ಯಂತ ಖೇದಕರ ಮತ್ತು ಕ್ರೈಸ್ತ ಸಮುದಾಯಕ್ಕೆ ಮಾಡಿದ ಅನ್ಯಾಯ ಮತ್ತು ಅಪಮಾನ.

ರಾಜ್ಯದ ಮುಖ್ಯಮಂತ್ರಿಗಳು ಈ ಹಿಂದೆ ಕ್ರೈಸ್ತ ಸಮುದಾಯದ ಧಾರ್ಮಿಕ ನಾಯಕರು ಭೇಟಿ ಮಾಡಿ ಕೂಡಲೇ ನಿಗಮದ ಆಡಳಿತ್ಮಾಕವಾಗಿ ಜಾರಿಗೆ ತಂದು ಸ್ಥಾಪಿಸಬೇಕೆಂದು ಒತ್ತಾಯಿಸಿದಾಗ ಸಮ್ಮತಿ ಸೂಚಿಸಿದ ಮುಖ್ಯಮಂತ್ರಿಗಳು ವಿಧಾನ ಪರಿಷತಿನಲ್ಲೂ ಹೇಳಿಕೆ ನೀಡಿ, ಬಜೆಟಿನಲ್ಲಿ ಘೋಷಿಸಿದ ಆದೇಶವನ್ನು ಜಾರಿಗೆ ತರುವುದಾಗಿ ತಿಳಿಸಿದ್ದರು. ಈ ಆದೇಶ ಇಡೀ ಸಮಾಜಕ್ಕೆ ನೋವನ್ನುಂಟುಮಾಡಿದೆ.
ನಮ್ಮ ಬೇಡಿಕೆಗಳು:

  • ಮೇಲಿನ ನಿರ್ಣಯವನ್ನು ಕೈಬಿಟ್ಟ ನಿಗಮದ ಆದೇಶವನ್ನು ಕೂಡಲೇ ಹಿಂದಕ್ಕೆ ತರಿಸಿ, ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಿಸಬೇಕು
  • ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ನೀಡಿದ 200ಕೋಟಿ ರೂಪಾಯಿಯನ್ನು ಕೂಡಲೇ ಬಿಡುಗಡೆ ಮಾಡಬೇಕು.
  • 2019-20-21ನೇ ಸಾಲಿನಲ್ಲಿ ಸ್ಥಗಿತಗೊಳಿಸಿದ ಎಲ್ಲಾ ಶೈಕ್ಷಣಿಕ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು
    ದೇಶದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿದ್ದ 20ಲಕ್ಷದ ಯೋಜನೆಯನ್ನು ರದ್ದುಗೊಳಿಸಲಾಗಿತ್ತು, ಈ ಯೋಜನೆಯನ್ನು ಕೂಡಲೇ ಪ್ರಾರಂಭಿಸಬೇಕು.
  • ಬಡವರಿಗೆ ನೀಡಲಾಗಿರುವ ಶ್ರಮಶಕ್ತಿ, ಸ್ವಉದ್ಯೋಗದ ಅಡಿಯಲ್ಲಿ ನೀಡುವ ಹಣವನ್ನು 60 ಶೇಕಡದಷ್ಟು ಕಡಿತಗೊಳಿಸಲಾಗಿದ್ದು, ಇದನ್ನು ಕೂಡಲೇ ಹಿಂದಿನಂತೆ ಸಂಪೂರ್ಣವಾಗಿ ನೀಡಬೇಕು.
  • ಅರಿವು ಯೋಜನೆಯನ್ವಯ ಇಂಜಿನಿಯರ್, ಮೆಡಿಕಲ್ ಮತ್ತು ವೃತ್ತಿಪರ ಕೋರ್ಸುಗಳೀಗೆ ನೀಡುವ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದ್ದು, ಅದನ್ನು ಹಿಂದಿನಂತೆ ನೀಡಬೇಕು ಮತ್ತು ಬಿಡುಗಡೆಗೊಳಿಸಬೇಕು.
  • ಚರ್ಚುಗಳ ರಿಪೇರಿ, ಸಮುದಾಯ ಭವನಗಳಿಗೆ ಅನುದಾನ ಬಿಡುಗಡೆಗೊಳಿಸದೇ, ಕಾಮಗಾರಿಗಳು ನಿಂತುಹೋಗಿದ್ದು, ಇದಕ್ಕೆ ನೀಡಲಾಗಿರುವ ಅನುದಾನ ಕೂಡಲೇ ಬಿಡುಗಡೆಗೊಳಿಸಬೇಕು.
  • ಶೇಕಡ 4ರಷ್ಟು ಜನಸಂಖ್ಯೆಯಿರುವ ಕ್ರೈಸ್ತ ಸಮುದಾಯಕ್ಕೆ ಕನಿಷ್ಠ 500ಕೋಟಿ ರೂಪಾಯಿಯ ಅನುದಾನವನ್ನು ಬಿಡುಗಡೆಗೊಳಿಸಬೇಕು, ಮುಂತಾದ ಬೇಡಿಕೆಗಳನ್ನು ಇದೇ ಸಂದರ್ಭದಲ್ಲಿ ಸರಕಾರದ ಮುಂದೆ ತರಲಾಗುವುದು.
  • ಬಜೆಟಿನಲ್ಲಿ ಜನಸಂಖ್ಯೆಯ ಆಧಾರದಲ್ಲಿ ಅನುದಾನವನ್ನು ಬಿಡುಗಡೆಗೊಳಿಸಬೇಕು.ದಿನಾಂಕ 7ರಂದು ಪ್ರಾರಂಭಗೊಳ್ಳುವ ವಿಧಾನ ಸಭೆಯ ಅಧಿವೇಶನದ ಸಂದರ್ಭದಲ್ಲಿ, ವಿಧಾನ ಸೌಧದ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ನಿಗಮ ಸ್ಥಾಪನೆಯ ಬೇಡಿಕೆಯನ್ನು ಒತ್ತಾಯಿಸಿ, ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಈಗಾಗಲೇ ತೀರ್ಮಾನಿಸಲಾಗಿದ್ದು, ರಾಜ್ಯದ 20 ಕಡೆಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲಾಗಿದ್ದು, ಅದರಲ್ಲಿ ತಾನು ಭಾಗವಹಿಸುವುದಾಗಿ ಐವನ್ ಡಿ ಸೋಜರವರು ತಿಳಿಸಿದರು.

ರಾಜ್ಯ ಸರಕಾರವು ಈಗಾಗಲೇ ವಿವಿಧ ಸಮುದಾಯದ 80 ನಿಗಮಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರುಗಳನ್ನು ನೇಮಕ ಮಾಡಲಾಗಿದ್ದು, ಇತ್ತೀಚೆಗೆ ಘೋಷಣೆ ಮಾಡಿದ ವೀರಶೈವ, ಲಿಂಗಾಯಿತ ಸಮುದಾಯಕ್ಕೆ ಎರಡೇ ದಿನದಲ್ಲಿ ನಿಗಮ ಘೋಷಿಸಿ, ಅಧ್ಯಕ್ಷ ಮತು ಉಪಾಧ್ಯಕ್ಷರನ್ನು ನೇಮಿಸಿ, 500ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿರುವ ಕಾಳಜಿ, ಕ್ರೈಸ್ತರ ಮೇಲೆ ಯಾಕೆ ಇಲ್ಲ? ಎಂಬುದು ರಾಜ್ಯಾದ್ಯದಂತ ಕ್ರೈಸ್ತ ಸಮುದಾಯದ ಬೇಡಿಕೆಯಾಗಿದೆ. ಈ ಸಮುದಾಯದವರು ಬಡವರು ಇಲ್ಲವೇ?. ಈ ಸಮುದಾಯದ ನಿರ್ಲಕ್ಷತೆಗೆ ಕಾರಣವೇನು? ಎಂದು ಪ್ರಶ್ನಿಸಿದರು.

ಡಿಸೆಂಬರ್ 4ರಂದು ಬೆಳಿಗ್ಗೆ 9.30ರಿಂದ ಸಂಜೆ 5.00 ಗಂಟೆಯವರೆಗೆ ನಗರದ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಎದುರು ಉಪವಾಸ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ
ಪ್ರತಿಭಟನೆಯಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸಲಿದ್ದಾರೆ ಮತ್ತು ರಾಜ್ಯ ಸರಕಾರದ ಕ್ರೈಸ್ತ ವಿರೋಧಿ ನೀತಿಯನ್ನು ಪ್ರತಿಭಟಿಸಲಾಗುವುದು ಎಂದು ಅವರು ತಿಳಿಸಿದರು


Spread the love