ಡುಂಗ್ರಿ ಗರಾಸಿಯ ಸಮುದಾಯಕ್ಕೆ ಭಿಕ್ಷಾಟನೆಯೇ ಬದುಕು

Spread the love

ಡುಂಗ್ರಿ ಗರಾಸಿಯ ಸಮುದಾಯಕ್ಕೆ ಭಿಕ್ಷಾಟನೆಯೇ ಬದುಕು

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅನುವಿನಕಟ್ಟೆ ಗ್ರಾಮದಲ್ಲಿರುವ ಡುಂಗ್ರಿ ಗರಾಸಿಯ ಸಮುದಾಯವು ಇವತ್ತಿಗೂ ಭಿಕ್ಷಾಟನೆಯನ್ನೇ ನಂಬಿ ಬದುಕುತ್ತಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಅದು ನಿಜ.

ಇವರ ಬದುಕು ಹೇಗಿದೆ ಎಂದರೆ? ತಲೆಮೇಲೆ ಹರಕು ಮುರುಕು ಗುಡಿಸಲ ಸೂರು.. ಚಿಂದಿ ಆಯೋದು, ಭಿಕ್ಷಾಟನೆಯೇ ಜೀವನ. ಇತ್ತೀಚೆಗೆ ಒಂದಷ್ಟು ಮಟ್ಟಿಗೆ ಎಲ್ಲ ಸಮುದಾಯಗಳ ಜನರ ಬದುಕು ಬದಲಾಗಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಡುಂಗ್ರಿ ಸಮುದಾಯದ ಜನರ ಮಾತ್ರ ಅಭಿವೃದ್ಧಿಯಾಗಿಲ್ಲ. ಇವತ್ತಿಗೂ ಚಿಂದಿ ಆಯ್ದುಕೊಂಡು, ಭಿಕ್ಷಾಟನೆ, ಛತ್ರಿ, ಬಕೆಟ್ ರಿಪೇರಿ, ಮಾಡಿಕೊಂಡು ಕಡುಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

ಒಂದು ಚಿಕ್ಕ ಗುಡಿಸಲಲ್ಲಿ ಇಪ್ಪತ್ತರಿಂದ ಮೂವತ್ತು ಜನ ವಾಸಿಸುತ್ತಿದ್ದು, ಬೇಸಿಗೆಯಲ್ಲಿ ಬೀದಿಯಲ್ಲಿ ಮಲಗುವುದು, ತಾತ್ಕಾಲಿಕ ಶೆಡ್‌ಗಳೇ ಸ್ನಾನದ ಮನೆ, ಕಡ್ಡಿಪುಳ್ಳೆಗಳೇ ಅಡುಗೆಗೆ ಸಾಧನವಾಗಿದೆ. ಒಂದೇ ಮನೆಯಲ್ಲಿ ಮೂರರಿಂದ ನಾಲ್ಕು ಕುಟುಂಬಗಳು ಮತ್ತು ಹದಿನೈದರಿಂದ ಇಪ್ಪತ್ತು ಜನ ವಾಸಿಸುತ್ತಿದ್ದು, ಹೆಚ್ಚಿನವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಇವರು ಪಂಚರಂಗಿ ಭಾಷೆಯನ್ನು ಮಾತನಾಡುತ್ತಿದ್ದು, ಸಮುದಾಯ ಅವಸಾನದಂಚಿಗೆ ತಲುಪುತ್ತಿದೆ. ನಮ್ಮ ರಾಜ್ಯದಲ್ಲಿ ಡುಂಗ್ರಿ ಸಮುದಾಯ ಕೆಲವೇ ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದ್ದು ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ ಮುಂತಾದ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಣದಿಂದ ವಂಚಿತರಾಗಿರುವ ಇವರ ಪೈಕಿ ಬಹುತೇಕ ಮಂದಿ ಶಾಲೆಯ ಮುಖವನ್ನೇ ನೋಡಿಲ್ಲ, ಬ್ಯಾಂಕ್ ಖಾತೆಯನ್ನು ಹೊಂದಿಲ್ಲ. ಇವರಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ವಿಷಾದದ ಸಂಗತಿಯಾಗಿದೆ.

ಇಂತಹ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮುಂದಾಗಬೇಕಿದೆ.


Spread the love