ಡ್ಯಾಂ ಕೀ ಶೆಟ್ಟರ್, ಸವದಿ ಕೈಯ್ಯಲ್ಲಿ!: ಡಿ ಕೆ ಶಿವಕುಮಾರ್ ವ್ಯಂಗ್ಯ

Spread the love

ಡ್ಯಾಂ ಕೀ ಶೆಟ್ಟರ್, ಸವದಿ ಕೈಯ್ಯಲ್ಲಿ!: ಡಿ ಕೆ ಶಿವಕುಮಾರ್ ವ್ಯಂಗ್ಯ

ಕುಂದಾಪುರ: ಒಂದು ಕಪ್ಪು ಚುಕ್ಕೆಯಿಲ್ಲದೆ ಗೋಪಾಲ ಪೂಜಾರಿಯವರು 4 ಬಾರಿ ಶಾಸಕರಾಗಿ ಜನಸೇವೆ ಮಾಡಿ ಸೋತರೂ ಕ್ಷೇತ್ರದ ಜನರ ಹಿತಕ್ಕಾಗಿ ಸದಾ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಪ್ರತಿಜ್ಞೆ ಮಾಡಬೇಕು. ಪೂಜಾರಿಯವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಅವರು ರವಿವಾರ ಬೈಂದೂರಿನ ಯಡ್ತರೆಯ ಜೆಎನ್‌ಆರ್ ಕಲಾ ಮಂದಿರದಲ್ಲಿ ನಡೆದ ಬೈಂದೂರು ಹಾಗೂ ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಇಲ್ಲಿನ ಮೀನುಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಕಾಂಗ್ರೆಸ್‌ ಪಕ್ಷವನ್ನು ನಂಬಿ ಬಿಜೆಪಿಯಿಂದ ನೂರಾರು ಮಂದಿ ಬಂದಿರುವುದಕ್ಕೆ ಅವರ ನಂಬಿಕೆಗೆ ನನ್ನ ಕೋಟಿ ನಮಸ್ಕಾರಗಳು. ಹಿಂದುತ್ವ ಯಾರ ಮನೆಯ ಆಸ್ತಿಯಲ್ಲ. ನಾನು ಶಿವನ ಕುಮಾರ, ನಾನು ಹಿಂದೂ, ಸಿದ್ದರಾಮಯ್ಯನವರು ಹಿಂದೂ. ಕಳೆದೊಂದು ದಿನಗಳಿಂದ ಧರ್ಮಸ್ಥಳ, ಶಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದೇನೆ. ಈ ಸಮಾವೇಶ ಮುಗಿದ ಬಳಿಕ ಕೊಲ್ಲೂರಿಗೆ ತೆರಳಿ ನಿಮಗೆಲ್ಲರಿಗೂ ಶಕ್ತಿ ಕೊಡಬೇಕು ಎಂದು ತಾಯಿಯಲ್ಲಿ ಪ್ರಾರ್ಥಿಸುವೆ ಎಂದರು.

ಕಾರ್ಯಕರ್ತರ ಸಮಾವೇಶದಲ್ಲಿ ಶಕ್ತಿಶಾಲಿ ಯುವ ಸಮುದಾಯವನ್ನು ಕಂಡು ದಂಗಾಗಿದ್ದೇನೆ. ಕಾಂಗ್ರೆಸ್‌ ಪಕ್ಷದಲ್ಲಿ ಹೊಸಬರು, ಹಳಬರು ಎನ್ನುವ ಪ್ರಶ್ನೆಯೇ ಇಲ್ಲ. ಕಷ್ಟಕಾಲದಲ್ಲಿ ಜೊತೆಗೆ ಬಂದವರನ್ನು ನಾಯಕರು ಅಂದುಕೊಳ್ಳಬೇಕು. ಬಿಜೆಪಿ ಸರಕಾರ ಬಂದ ನಂತರ ರಾಜ್ಯದ ಜನರಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ಜನರ ಆದಾಯ ದ್ವಿಗುಣ ಆಗಿಲ್ಲ. ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಬಿಜೆಪಿ ಸರ್ಕಾರ ಕೊನೆಯ ಪಕ್ಷ ಪರಿಶುದ್ಧ ಆಡಳಿತವೂ ಕೊಟ್ಟಿಲ್ಲ. ಇದರಿಂದ ಬಿಜೆಪಿಯು ರಾಜ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಯಾರಿಂದಲೂ ರಕ್ಷಣೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕಾಂಗ್ರೆಸ್ ಈ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದ ಹಾಗೆ ಎಂದರು.

ಮನೆಯ ಹಿರಿಯ ಸದಸ್ಯರನ್ನು ವಯಸ್ಸಿನ ಕಾರಣ ನೀಡಿ ಮನೆಯಿಂದ ಹೊರಹಾಕಲು ಸಾಧ್ಯವಿದೆಯಾ? ಯಾರಿಗೆ ಎಷ್ಟು ಗೌರವ ಕೊಡಬೇಕೊ ಅದನ್ನು ಕೊಡಲೇಬೇಕು. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಮತದಾರರೇ ಈಶ್ವರ. ಅಂತೇಯೇ ನಮ್ಮ ಗೋಪಾಲ ಪೂಜಾರಿಯವರು ಅಧಿಕಾರ ಇರಲಿ, ಇಲ್ಲದೇ ಇರಲಿ ಈ ಕ್ಷೇತ್ರದ ಜನರ ನಡುವೆ ಎಂದಿಗೂ ಇರುತ್ತಾರೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಪಕ್ಷದಲ್ಲಿ ದೊಡ್ಡ ಬದಲಾವಣೆಯನ್ನು ನೋಡುತ್ತಿದ್ದೇವೆ ಎಂದರು.

ನಾನು ಡ್ಯಾಂ ಒಡೆದು ಹೋಯಿತು ಅಂದಿದ್ದೆ. ಆದರೆ ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್‌ನಲ್ಲಿ ನೀರೇ ಇಲ್ಲ ಇನ್ನೆಲ್ಲಿ ಡ್ಯಾಂ ಎಂದಿದ್ದರು. ಆದರೆ ನಾನು ಹೇಳಿದ್ದು ನಿಮ್ಮ ಬಿಜೆಪಿ ಡ್ಯಾಂ ಒಡೆದು ನೀರು ಖಾಲಿಯಾಗಿದೆ ಎಂದು. ಡ್ಯಾಂ ಕೀ ಶೆಟ್ಟರ್, ಲಕ್ಷ್ಮಣ್ ಸವದಿಯಂತವರ ಕೈಯಲ್ಲಿ ಕೊಟ್ಟಿದ್ದರು. ಆದರೆ ರಾಜ್ಯದ ಬಿಜೆಪಿಯ ಭ್ರಷ್ಟ ಆಡಳಿತಕ್ಕೆ ಬೇಸತ್ತು ಅವರೆಲ್ಲ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ ಗೋಪಾಲ ಪೂಜಾರಿ ಮಾತನಾಡಿ, 6 ಚುನಾವಣೆಯಲ್ಲಿ ಕಣಕ್ಕಿಳಿದು, 2 ರಲ್ಲಿ ಸೋತು, ನಾಲ್ಕರಲ್ಲಿ ಗೆದ್ದಿದ್ದೇನೆ. ಕಳೆದ ಬಾರಿ ಬಿಜೆಪಿ ಅಪಪ್ರಚಾರದಿಂದ ಸೋತೆ. ಮರವಂತೆ ಬಂದರಿನ ಅಭಿವೃದ್ಧಿಗೆ 4 ಬಜೆಟ್ ಕಳೆದರೂ ಮಾಡಿಲ್ಲ. ಅದಕ್ಕೆ ನಮ್ಮ ಸರಕಾರವೇ ಬರಬೇಕಾಗಿದೆ ಎಂದ ಅವರು, ಪಕ್ಷಕ್ಕೆ ಸೇರ್ಪಡೆಯಾದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವೆ ಎಂದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕರಾದ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕರಾದ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಮುಖಂಡರಾದ ಯುಬಿ ಶೆಟ್ಟಿ, ಎಂ.ಎ. ಗಫೂರ್, ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ವಿಜಯ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಅರವಿಂದ ಪೂಜಾರಿ, ರಘುರಾಮ ಶೆಟ್ಟಿ, ವಾಸುದೇವ ಯಡಿಯಾಳ, ಅಶೋಕ್‌ ಪೂಜಾರಿ ಬೀಜಾಡಿ, ಗೌರಿ ದೇವಾಡಿಗ, ಮಂಜುಳಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.


Spread the love