
ಡ್ರಗ್ಸ್ ಸೇವನೆ ಆರೋಪ: 42 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ ಮಾಹೆ
ಉಡುಪಿ: ಡ್ರಗ್ಸ್ ಸೇವನೆ ಆರೋಪದ ಮೇಲೆ ಮಣಿಪಾಲದ ಮಾಹೆ ಆಡಳಿತ ಮಂಡಲಿ 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡಿದ ಆದೇಶ ಹೊರಡಿಸಿದೆ.
ಡ್ರಗ್ಸ್ ಸೇವನೆ ವಿರುದ್ಧ ಸಮರ ಸಾರಿರುವ ಉಡುಪಿ ಪೊಲೀಸರ ಜೊತೆ ಕೈ ಜೋಡಿಸಿರುವ ಮಾಹೆ ವಿವಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಇಂತಹ ನಿರ್ಧಾರ ಕೈಗೊಂಡಿದ್ದು, ಸಹಜ ಜೀವನ ನಡೆಸುವ ಉದ್ದೇಶದಲ್ಲಿ ಈ ಆದೇಶ ಹೊರಡಿಸಿದ್ದೇವೆ. ಕಾಲೇಜು ಕ್ಯಾಂಪಸ್ ನಲ್ಲಿ ಆರೊಗ್ಯಕರ ವಾತಾವರಣ ಸೃಷ್ಟಿಸಲು ನಾವು ಬದ್ಧರಾಗಿದ್ದು, ವಿದ್ಯಾರ್ಥಿಗಳ ವ್ಯಸನ ಸಹಿಸಲ್ಲ, ಜೀರೋ ಟಾಲರೆನ್ಸ್ ಇಂತಹ ಪ್ರಕರಣ ಮುಂದುವರೆಯಬಾರದು ಎಂದು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಾವು ಹಲವಾರು ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಈ ಕಾರ್ಯಚರಣೆಯಲ್ಲಿ ಅನೇಕ ಮಂದಿ ಪೆಡ್ಲರ್ ಗಳನ್ನ ವಶಕ್ಕೆ ತೆಗೆದುಕೊಂಡಿದ್ದೇವೆ. ಪೆಡ್ಲರ್ ಗಳ ಮೂಲಕ ಗ್ರಾಹಕರು ಯಾರು ಅನ್ನೋದು ಪತ್ತೆಯಾಗಿದ್ದು, ಕೆಲ ಗ್ರಾಹಕರಿಂದ ಪೆಡ್ಲರ್ ರ್ಗಳು ಯಾರು ಅನ್ನೋದು ಪತ್ತೆಯಾಗಿದೆ. ಮಾಹೆಯ ಕೆಲ ವಿದ್ಯಾರ್ಥಿಗಳು ಕೂಡ ಪೆಡ್ಲೆರ್ ಗಳಾಗಿದ್ದು, ಅವರಿಂದ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯಗಳು ಪತ್ತೆಯಾಗಿತ್ತು. ಈ ಪ್ರಕರಣ ಬಗ್ಗೆ ನಾವು ವಿವಿಗೆ ಮಾಹಿತಿ ನೀಡಿದ್ದೆವು.
ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಡ್ರಗ್ಸ್ ವ್ಯವಹಾರ ನಡೆದ ಬಗ್ಗೆ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ನೀಡಿದ್ದೇವೆ. ಟೆಸ್ಟಿಂಗ್ ಮೂಲಕ ಸಾಬೀತಾಗಿರುವ ಪ್ರಕರಣಗಳ ವಿವರ ಕೂಡ ವಿವಿಗೆ ನೀಡಿದ್ದೇವೆ. ಮಣಿಪಾಲ ವಿವಿ ಈ ವಿಚಾರಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ಮಣಿಪಾಲ ವಿವಿ 42 ಮಂದಿಯನ್ನು ಅಮಾನತು ಮಾಡಿದೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಾಗಲಿ ವಿವಿಯಾಗಲಿ ನಿರ್ಲಕ್ಷ ವಹಿಸುವುದಿಲ್ಲ ಅನ್ನೋ ಸಂದೇಶ ರವಾನೆಯಾಗಿದೆ ಎಂದರು.
ಮಾದಕ ದ್ರವ್ಯ ಸೇವನೆ ಮಾಡಿದವರನ್ನು ಮಾಹೆ ವಿವಿ ತಾತ್ಕಾಲಿಕ ಅಮಾನತು ಮಾಡಿದೆ. ಅಮಾನತು ಮಾಡಲಾದ ವಿದ್ಯಾರ್ಥೀಗಳಿಗೆ ಒಂದು ತಿಂಗಳ ಕಾಲ ತರಗತಿ ಹಾಜರಾಗಲು ಅವಕಾಶವಿಲ್ಲ. ವಿಶ್ವವಿದ್ಯಾಲಯದ ಯಾವುದೇ ಸೌಲಭ್ಯಗಳನ್ನು ಅವರು ಬಳಸುವಂತಿಲ್ಲ. ಪೆಡ್ಲರ್ಗಳ ಮೇಲೆ ಮತ್ತಷ್ಟು ಗಂಭೀರ ಕ್ರಮ ಕೈಗೊಳ್ಳಲಾಗುವುದು ಮಾತ್ರವಲ್ಲದೆ ಅವರ ವಿರುದ್ಧ ಪೋಲಿಸ್ ಇಲಾಖೆ ಕ್ರಿಮಿನಲ್ ಕೇಸ್ ಮಾಡುತ್ತೇವೆ ಎಂದರು.
ಎಡಿ ಜಿಪಿ ಅಲೋಕ್ ಕುಮಾರ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಮಂಗಳೂರಿನಲ್ಲಿ ವೈದ್ಯರ ಮಾದಕ ಸೇವನೆ ಪ್ರಕರಣ ಬೆಳಕಿಗೆ ಬಂದ ನಂತರ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ಮಾಹೆವಿವಿ ಕೂಡ ಆ ಬಳಿಕ ಮತ್ತಷ್ಟು ಅಲರ್ಟ್ ಆಗಿದೆ. ಮಾಹೆ ವಿದ್ಯಾರ್ಥಿಗಳು, ಫೆಲೋಶಿಪ್ ಮಾಡುತ್ತಿರುವ ವಿದ್ಯಾರ್ಥಿಗಳು, ಮಾಹೆ ಭಾಗಿತ್ವದಲ್ಲಿ ಪ್ರಾಜೆಕ್ಟ್ ನಡೆಸುತ್ತಿರುವವರು ಶೈಕ್ಷಣಿಕವಾಗಿ ಮಾಹೆ ಜೊತೆ ಸಂಪರ್ಕ ಇರುವ ವಿದ್ಯಾರ್ಥಿಗಳ ಪಟ್ಟಿ ಮಾಡಿಕೊಟ್ಟಿದ್ದೇವೆ. ಈ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೋಗುತ್ತದೆ.
ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಾನಸಿಕವಾಗಿ ಧೈರ್ಯ ಹೇಳಲಾಗುತ್ತಿದೆ. ಮಾದಕ ಸೇವನೆ ಮಾಡಿದವರನ್ನು ಕ್ರಿಮಿನಲ್ ಗಳು ಎಂದು ಪರಿಗಣಿಸಲಾಗುವುದಿಲ್ಲ. ಪೆಡ್ಲರ್ಗಳನ್ನು ಕ್ರಿಮಿನಲ್ ಗಳಿಂದೇ ಪರಿಗಣಿಸುತ್ರೇವೆ. ಕಳೆದ ಮೂರು ತಿಂಗಳಲ್ಲಿ ಪತ್ತೆಯಾಗಿರುವ ಪ್ರಕರಣಗಳ ಆಧಾರದಲ್ಲಿ ಪಟ್ಟಿ ನೀಡಿದ್ದೆವು. ಮೊಟ್ಟ ಮೊದಲ ಬಾರಿಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ವಿವಿ ಈ ಕ್ರಮಕ್ಕೆ ಮುಂದಾಗಿದೆ ಎಂದರು.