
ತಂತ್ರಜ್ಞಾನದ ಸದುಪಯೋಗದಿಂದ ಅದ್ಭುತ ಪ್ರತಿಭೆ ರೂಪುಗೊಳ್ಳಬಹುದು – ಜೋಗಿ
ಕುಂದಾಪುರ: ನಾವು 100 ಪುಟ ಓದುವುದನ್ನು ಈಗಿನ ಡಿಜಿಟಲ್ ಯುಗದ ಮಕ್ಕಳು 10 ನಿಮಿಷದ ವಿಡಿಯೋದ ಮೂಲಕ ತಿಳಿದುಕೊಳ್ಳುತ್ತಾರೆ. ಹಾಗಾಗಿ ಜ್ಞಾನದಲ್ಲಿ ಯುವಕರು ಹಿಂದೆ ಬಿದ್ದಿಲ್ಲ. ಆದರೆ ಒಬ್ಬ ಓದುಗನಿಗೆ ಬೇಕಾದ ಸಂಯಮ ಇರುವುದಿಲ್ಲ. ಅದೇ ವ್ಯತ್ಯಾಸವೇ ಪ್ರಮುಖವಾದುದು. ಈಗಿನವರಲ್ಲಿ ಪ್ರತಿಭೆಗೆ ಏನೂ ಕೊರತೆಯಿಲ್ಲ. ಟೆಕ್ನಾಲಜಿಯ ಉತ್ತಮ ಸ್ಥಿತಿಯಲ್ಲಿದ್ದೀರಿ. ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಪ್ರತಿಯೊಂದು ಕ್ಷೇತ್ರದ ಅದ್ಭುತ ಪ್ರತಿಭೆಗಳು ನೀವಾಗಿ ರೂಪುಗೊಳ್ಳಬಹುದು ಎಂದು ಲೇಖಕ, ಕನ್ನಡಪ್ರಭದ ಪುರವಣಿ ಸಂಪಾದಕ ಜೋಗಿ ಹೇಳಿದರು.
ಭಾನುವಾರ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ನಡೆದ ‘ಹಸ್ತಿನಾವತಿ’ ಕಾದಂಬರಿ ಮರು ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಬಾಲ್ಯದಲ್ಲಿ ಶಿವರಾಮ ಕಾರಂತರ ಭಾಷಣಗಳನ್ನು ಕೇಳುತ್ತಿದ್ದೆವು. ಅದುವೇ ನಮ್ಮನ್ನು ಇಲ್ಲಿ ತಂದು ನಿಲ್ಲಿಸಿದೆ. ಒಂದು ಹಾಡು ಬರೆದರೆ ಅದು ಎಷ್ಟು ವರ್ಷ ಕಳೆದರೂ, ನನ್ನ ಹಾಡು ಎನ್ನುವ ಭಾವ ಇರುತ್ತದೆ. ಕಥೆ, ಕಾದಂಬರಿ ಬರೆದರೂ ಇದೇ ಭಾವ ಇರುತ್ತದೆ. ಆ ರೀತಿಯ ಖಾಸಗಿಯಾದ ಆನಂದಗಳನ್ನು ಸೃಷ್ಟಿ ಮಾಡಿಕೊಳ್ಳಲು ನಾವು ಕಲಿಯಬೇಕು. ಕುಂದಾಪುರ ಸೀಮೆಯು ಸಾಹಿತ್ಯ ಲೋಕಕ್ಕೆ ಮೊಗೇರಿ ಗೋಪಾಲಕೃಷ್ಣ ಅಡಿಗರಂತಹ ಅತ್ಯದ್ಭುತ ಲೇಖಕರನ್ನು ಕೊಟ್ಟ ಊರು. ಒಂದು ಜನಾಂಗದ ಕಣ್ಣು ತೆರೆಸಿದ ಕವಿಗಳೆಂದು ಅಡಿಗರನ್ನು ಲಂಕೇಶರು ವರ್ಣಿಸಿದ್ದಾರೆ ಎಂದರು.
ಜೋಗಿಯ ಹಸ್ತಿನಾವತಿ ಕಾದಂಬರಿ ಅನಾವರಣಗೊಳಿಸಿದ ಬೆಂಗಳೂರು ವಿವಿ ವಿತ್ತಾಧಿಕಾರಿ ಅಜಿತ್ ಹೆಗ್ಡೆ ಶಾನಾಡಿ ಮಾತನಾಡಿ, ಜೋಗಿಯವರ ಅನೇಕ ಬರೆಹಗಳನ್ನು ಓದಿದ್ದೇನೆ. ಆದರೆ ಹಸ್ತಿನಾವತಿ ಕೃತಿಯಲ್ಲಿ ರಾಜಕೀಯ, ಧಾರ್ಮಿಕತೆ, ಆದ್ಯಾತ್ಮ, ಪ್ರೇಮಕತೆ ಎಲ್ಲವೂ ಇದೆ. ಯವಮನಸ್ಸುಗಳು ಸೇರಿದಂತೆ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಇದು. ಜೋಗಿಯವರು ಬರೆದ ಅಷ್ಟೂ ಪುಸ್ತಕಗಳನ್ನು ಓದಿದವರು ಪ್ರಬುದ್ದ ಓದುಗ, ಬರಹಗಾರರಾಗುವುದರಲ್ಲಿ ಸಂದೇಹವೇ ಇಲ್ಲ. ಕುಂದಾಪುರದ ನೆಲದಲ್ಲಿ ಸಾಹಿತ್ಯ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಈ ಹೊತ್ತಲ್ಲಿ ಇಂತಹ ಚಟುವಟಿಕೆಗಳು ಹೆಚ್ಚೆಚ್ಚು ನಡೆಯುತ್ತಿರಬೇಕು. ಹಸ್ತಿನಾವತಿ ಕಾದಂಬರಿಯನ್ನು ಓದಿದರೆ ಅದು ನಾವು ಜೋಗಿ ಬರೆಹಗಳಿಗೆ ಕೊಡುವ ಅತ್ತ್ಯುನ್ನತ ಗೌರವ ಎಂದರು.
ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕದ ಒಳನೋಟ ತೆರೆದಿಟ್ಟರು. ಕುಂದಾಪುರದ ವಕೀಲ ಸತೀಶ್ಚಂದ್ರ ಕಾಳಾವರ್ಕರ್ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಜೊತೆ ಜೋಗಿಯವರ ಸಂವಾದ ನಡೆಯಿತು.
ಜನಸೇವಾ ಟ್ರಸ್ಟ್ನ ಸಂಚಾಲಕ ವಸಂತ ಗಿಳಿಯಾರು ಪ್ರಸ್ತಾಪಿಸಿದರು. ರಾಘವೇಂದ್ರ ರಾಜ್ ಸಾಸ್ತಾನ ವಂದಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.