
ತಕ್ಷಣದಲ್ಲಿ ಕರಾವಳಿ ಜಂಕ್ಷನ್ ನಿಂದ ಮಲ್ಪೆ ವರೆಗಿನ ರಸ್ತೆಯ ಹೊಂಡ ಮುಚ್ಚಲು ಕ್ರಮ – ಶಾಸಕ ರಘುಪತಿ ಭಟ್
ಉಡುಪಿ: ಸುಗಮ ಸಂಚಾರದ ದೃಷ್ಟಿಯಿಂದ ಉಡುಪಿಯ ಕರಾವಳಿ ಜಂಕ್ಷನ್ ನಿಂದ ಮಲ್ಪೆ ವರೆಗಿನ ರಸ್ತೆಯ ಹೊಂಡಗಳನ್ನು ಮುಚ್ಚಲು ಸೂಚಿಸಲಾಗಿದ್ದು, ತಕ್ಷಣದಲ್ಲಿ ಈ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಕೆ ರಘುಪತಿ ಭಟ್ ಅವರು ಹೇಳಿದ್ದಾರೆ
ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169 ಎ ಇದರ ಹೆಬ್ರಿಯಿಂದ ಮಲ್ಪೆ ವರಿಗಿನ ರಸ್ತೆ ಅಭಿವೃದ್ಧಿಗೆ ಈಗಾಗಲೇ ರೂ. 320.00 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದು ನ್ಯಾಷನಲ್ ತೀರ್ಥಹಳ್ಳಿ ಜೆವಿ ಇವರಿಗೆ ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ನೀಡಲಾಗಿದೆ. ಇದರಲ್ಲಿ ಕರಾವಳಿ ಜಂಕ್ಷನ್ ನಿಂದ ಮಲ್ಪೆ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಭೂಸ್ವಾಧೀನ ಸೇರಿದಂತೆ ರಸ್ತೆ ಅಭಿವೃದ್ಧಿಗೆ ರೂ 80.00 ಕೋಟಿ ಮಂಜೂರಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲಿಯವರೆಗೆ ಸುಗಮ ಸಂಚಾರಕ್ಕಾಗಿ ರಸ್ತೆಯ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ಕಾಮಗಾರಿಯನ್ನು ಸದರಿ ಸಂಸ್ಥೆಯೇ ನಡೆಸುತ್ತದೆ. ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.