ತಾಲಿಬಾನ್ ಗೆ ಸಾಕು, ಕರ್ನಾಟಕದ ಜನತೆಗೆ ಅಕ್ಕಿ ಬೇಕು:ಕೇಂದ್ರ ಸರ್ಕಾರದ ವಿರುದ್ಧ ರಮೇಶ್ ಕಾಂಚನ್ ಆಕ್ರೋಶ

Spread the love

ತಾಲಿಬಾನ್ ಗೆ ಸಾಕು, ಕರ್ನಾಟಕದ ಜನತೆಗೆ ಅಕ್ಕಿ ಬೇಕು:ಕೇಂದ್ರ ಸರ್ಕಾರದ ವಿರುದ್ಧ ರಮೇಶ್ ಕಾಂಚನ್ ಆಕ್ರೋಶ

ಉಡುಪಿ: ಕಾಂಗ್ರೆಸ್ ನೇತೃತ್ವದ ನೂತನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಭಾರತೀಯ ಆಹಾರ ನಿಗಮವು ಅಕ್ಕಿ ಕೊಡಲು ಒಪ್ಪಿಕೊಂಡ ಬಳಿಕ ರಾಜ್ಯಕ್ಕೆ ಅಕ್ಕಿ ನೀಡದಂತೆ ಕೇಂದ್ರ ಸರ್ಕಾರ ತಡೆಯೊಡ್ಡಿರುವುದು ರಾಜ್ಯದ ಬಡಜನತೆಗೆ ಬಗೆದ ದ್ರೋಹವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕಿಂತ ನಮ್ಮ ದೇಶ ಕೆಳಗಿನ ಸ್ಥಾನದಲ್ಲಿದ್ದರೂ ರಾಜ್ಯಕ್ಕೆ ಅಕ್ಕಿ ನೀಡದೆ ಸತಾಯಿಸುತ್ತಿರುವುದನ್ನು ಕಂಡು ಬಹಳ ಬೇಸರವಾಗುತ್ತಿದೆ. ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿ ಪ್ರತಿ ವರ್ಷ ಟನ್ಗಟ್ಟಲೆ ಆಹಾರ ಧಾನ್ಯವು ಕೊಳೆಯುವ ಸ್ಥಿತಿಯಲ್ಲಿದ್ದರೂ ಕರ್ನಾಟಕಕ್ಕೆ ದ್ವೇಷ ಸಾಧಿಸುತ್ತಿರುವ ಬಿಜೆಪಿ ಸರ್ಕಾರವು ನಾವು ಹಣ ನೀಡುತ್ತೇವೆ ಎಂದು ಹೇಳಿದರೂ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಲು ಒಪ್ಪುತ್ತಿಲ್ಲ. ಪ್ರಧಾನಿ ಮೋದಿಯವರು ನೆರೆಯ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಸುಮಾರು 10,000 ಟನ್ಗಳಷ್ಟು ಆಹಾರ ಧಾನ್ಯಗಳನ್ನು ಕಳುಹಿಸಿದ್ದಾರೆ ಆದರೆ ಭಾರತದಲ್ಲಿ ಅತ್ಯಧಿಕ ತೆರಿಗೆ ಸಂಗ್ರಹವಾಗುವ ಕರ್ನಾಟಕ ರಾಜ್ಯಕ್ಕೆ ಅಕ್ಕಿಯನ್ನು ಕೊಡಲು ಸಿದ್ದರಿಲ್ಲ. ಕರ್ನಾಟಕದಿಂದ ಬಿಜೆಪಿಯ 25 ಸಂಸದರನ್ನು ಜನರು ಆರಿಸಿದರೂ ಪ್ರಧಾನಿ ಮೋದಿಯವರ ಮುಂದೆ ಕರ್ನಾಟಕಕ್ಕೆ ನ್ಯಾಯ ಒದಗಿಸುವಂತೆ ಮಾತನಾಡುವ ದಮ್ಮು ತಾಕತ್ತು ಯಾವ ಸಂಸದರಿಗೂ ಇಲ್ಲ. ಕರ್ನಾಟಕದ ಸಂಸದರು ಇನ್ನಾದರೂ ತಮ್ಮ ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಪ್ರಧಾನಿ ಮೋದಿಯವರಲ್ಲಿ ಕೇಳಲಿ. ಕೇಂದ್ರ ಬಿಜೆಪಿ ಸರ್ಕಾರವು ದ್ವೇಷ ರಾಜಕಾರಣವನ್ನು ಬಿಟ್ಟು ಕರ್ನಾಟಕದ ಜನತೆಗೆ ಅಕ್ಕಿ ಪೂರೈಕೆ ಮಾಡಲು ಸಹಕಾರಿಯಾಗಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love