ತಿ.ನರಸೀಪುರದಲ್ಲಿ ಇಬ್ಬರ ಬಲಿಪಡೆದಿದ್ದ ಚಿರತೆ ಸೆರೆ

Spread the love

ತಿ.ನರಸೀಪುರದಲ್ಲಿ ಇಬ್ಬರ ಬಲಿಪಡೆದಿದ್ದ ಚಿರತೆ ಸೆರೆ

ಮೈಸೂರು: ತಿ.ನರಸೀಪುರ ತಾಲೂಕಿನ ಎಂ.ಎಲ್.ಹುಂಡಿ ಗ್ರಾಮದ ಮಲ್ಲಪ್ಪನ ಬೆಟ್ಟದ ವ್ಯಾಪ್ತಿಯಲ್ಲಿ ಅಡ್ಡಾಡುತ್ತಾ ಜನ ಜಾನುವಾರುಗಳ ಮೇಲೆ ದಾಳಿ ಮಾಡಿ ಬಲಿಪಡೆದಿದ್ದಲ್ಲದೆ, ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಶುಕ್ರವಾರ ಮುಂಜಾನೆ 4 ಘಂಟೆ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಇದು ಸುಮಾರು 8 ವರ್ಷ ಪ್ರಾಯದ ಗಂಡು ಚಿರತೆಯಾಗಿದೆ. ಇದು ತಾಲೂಕಿನ ಎಂ.ಎಲ್.ಹುಂಡಿ ಗ್ರಾಮದ ಮಂಜುನಾಥ್ ಮತ್ತು ಎಸ್.ಕೆಬ್ಬೆಹುಂಡಿಯ ಮೇಘನಾಳನ್ನು ಬಲಿ ತೆಗೆದುಕೊಂಡಿತ್ತು. ಅಲ್ಲದೆ ಜಾನುವಾರುಗಳನ್ನು ಬಲಿಪಡೆದಿತ್ತು. ಈ ಚಿರತೆಯ ಸೆರೆಗೆ ಬಹಳಷ್ಟು ಒತ್ತಡಗಳು ಬಂದಿದ್ದವು ಈ ನಡುವೆ ಅರಣ್ಯ ಇಲಾಖೆ ಸೆರೆ ಹಿಡಿಯಲು ಸರ್ವ ಪ್ರಯತ್ನವನ್ನು ಮಾಡಿತ್ತು.

ಅರಣ್ಯ ಇಲಾಖೆಯು ನಾಲ್ಕು ತಂಡಗಳನ್ನು ರಚಿಸಿ ಚಿರತೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತಲ್ಲದೆ, ಚಿರತೆಯ ಸೆರೆಗಾಗಿ ಮಲ್ಲಪ್ಪ ಬೆಟ್ಟದ ಹಲವು ಕಡೆ ಬೋನುಗಳನ್ನು ಇಡಲಾಗಿತ್ತು. ಜತೆಗೆ ಚಿರತೆಯ ಚಲನವಲನ ಗುರುತಿಸಲು 30 ಆಧುನಿಕ ಥರ್ಮಲ್ ಡ್ರೋಣ್ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ ಚಿರತೆ ಮಾತ್ರ ಬೋನಿಗೆ ಬೀಳದೆ ತಪ್ಪಿಸಿಕೊಂಡು ಓಡಾಡುತ್ತಿತ್ತು.

ಆದರೀಗ ನರಸೀಪುರ ತಾಲೂಕಿನ ಎಂ.ಎಲ್.ಹುಂಡಿ ಗ್ರಾಮದ ಮಲ್ಲಪ್ಪನ ಬೆಟ್ಟದ ವ್ಯಾಪ್ತಿಯಲ್ಲಿಟ್ಟ ಬೋನಿಗೆ ಚಿರತೆ ಬಿದ್ದಿದ್ದು ಜನ ನೆಮ್ಮದಿಯುಸಿರು ಬಿಡುವಂತಾಗಿದೆ. ಚಿರತೆ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆಯೇ ಅದನ್ನು ಜನ ಜಮಾಯಿಸಿದ್ದರಿಂದ ಚಿರತೆಯನ್ನು ಬೇರೆಡೆಗೆ ಸಾಗಿಸಲು ಅರಣ್ಯ ಇಲಾಖೆ ಪರದಾಡುವಂತಾಯಿತು. ಸ್ಥಳಕ್ಕೆ ಧಾವಿಸಿದ ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ ಇಬ್ಬರ ಬಲಿ ಪಡೆದ ಚಿರತೆಯೇ ಸೆರೆ ಸಿಕ್ಕಿದ್ದೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಲೂಕಿನ ಹಲೆವೆಡೆ ಚಿರತೆ ಹಾವಳಿ ಹೆಚ್ಚಾಗಿದ್ದು, ಶೀಘ್ರ ಚಿರತೆಗಳನ್ನು ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಸ್ಥಳದಲ್ಲಿ ಸಿಎಫ್ ಮಾಲತಿ ಪ್ರಿಯ, ಡಿಸಿಎಎಫ್ ಕಮಲ ಕರಿಕಾಳನ್, ಎಸಿಎಫ್ ಲಕ್ಷೀಕಾಂತ್, ವಲಯ ಅರಣ್ಯಾಧಿಕಾರಿ ರಾಜೇಶ್, ಅರಣ್ಯ ಅಧಿಕಾರಿ ಯಮುನಾ , ಮಂಜುನಾಥ್, ಉಮೇಶ್, ಸರ್ಕಲ್ ಇನ್ಸ್ ಪೆಕ್ಟರ್ ಲೋಲಾಕ್ಷಿ ಇತರರು ಇದ್ದರು. ಇನ್ನು ಇಬ್ಬರು ಅಮಾಯಕರನ್ನು ಬಲಿ ತೆಗೆದು ಕೊಂಡಿದ್ದ ಚಿರತೆ ಹಾವಳಿಯ ಬಗ್ಗೆ ಗುರುವಾರ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಅಶ್ವಿನ್ ಕುಮಾರ್ ಅವರು ಚರ್ಚಿಸಿ ಶೀಘ್ರವೇ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


Spread the love