ತಿ.ನರಸೀಪುರ ಬಳಿ ವಿದ್ಯುತ್ ಅವಘಡಕ್ಕೆ ಮೂವರು ಬಲಿ

Spread the love

ತಿ.ನರಸೀಪುರ ಬಳಿ ವಿದ್ಯುತ್ ಅವಘಡಕ್ಕೆ ಮೂವರು ಬಲಿ

ತಿ. ನರಸೀಪುರ: ಗದ್ದೆಗೆ ಔಷಧಿ ಸಿಂಪಡಿಸಲು ಹೋಗಿದ್ದ ವೇಳೆಯಲ್ಲಿ ಮೂವರಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ನಡೆದಿದೆ.

ಜಮೀನು ಮಾಲೀಕ ರಾಜೇಗೌಡ (62 ) ಮಗ ಹರೀಶ್ (30 ) ಮತ್ತು ಕೂಲಿ ಕಾರ್ಮಿಕ ಮಹಾದೇವಸ್ವಾಮಿ(33) ಮೃತಪಟ್ಟ ದುರ್ದೈವಿಗಳು. ಇವರು ಮೂವರು ಭಾನುವಾರ ಬೆಳಗ್ಗೆ ಜಮೀನಿಗೆ ಔಷಧಿ ಸಿಂಪಡಿಸಲು ಜಮೀನಿಗೆ ತೆರಳಿದ್ದಾರೆ. ಆದರೆ ಜಮೀನಿನ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಗದ್ದೆಯೊಳಗೆ ಬಿದ್ದಿರುವುದು ಇವರ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ಗದ್ದೆಗೆ ಇಳಿದು ಔಷಧಿ ಸಿಂಪಡಿಸಲು ಮುಂದಾಗಿದ್ದು, ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ವಿ. ಗೋವಿಂದರಾಜು, ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣಪ್ಪ, ಪಿಎಸ್ಐ ಪಚ್ಚೇಗೌಡ, ಪೇದೆ ಮಹದೇಶ್ ಇತರರು ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಶಾಸಕ ಎಂ. ಅಶ್ವಿನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ದುರ್ಘಟನೆಗೆ ಸಂತಾಪ ಸೂಚಿಸಿದರು. ವಿದ್ಯುತ್ ಅವಘಡದಿಂದ ಮೃತಪಟ್ಟವರ ಕುಟುಂಬ ವರ್ಗಕ್ಕೆ ತಲಾ 5 ಲಕ್ಷಗಳ ರೂ.ಗಳ ಪರಿಹಾರ ಘೋಷಿಸಿದರು. ಅಲ್ಲದೆ, ಸರ್ಕಾರದಿಂದ ಸಿಗುವ ಇನ್ನಿತರ ಸೌಲಭ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ಧಾರೆ.


Spread the love

Leave a Reply

Please enter your comment!
Please enter your name here