ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ ಕಾವೇರಿ

Spread the love

ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ ಕಾವೇರಿ

ಮಡಿಕೇರಿ: ಕೊಡಗಿನಲ್ಲಿ ನಡೆಯುವ ಹಬ್ಬಗಳ ಪೈಕಿ ದಸರಾ ಹೊರತು ಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದು ಕಾವೇರಿ ತೀರ್ಥೋದ್ಭವದ ಸಂದರ್ಭ ಮಾತ್ರ. ಹೀಗಾಗಿ ಕೊಡಗಿನ ಪಾಲಿಗೆ ಕಾವೇರಿ ಜಾತ್ರೆಯಾಗಿದೆ.

ಸಾಮಾನ್ಯವಾಗಿ ಈ ವೇಳೆ ಅಂದರೆ ಅಕ್ಟೋಬರ್ ತಿಂಗಳು ಕೊಡಗಿಗೆ ಪ್ರವಾಸಿಗರು ಸೇರಿದಂತೆ ಭಕ್ತರು ಆಗಮಿಸುವ ಕಾಲವಾಗಿದೆ. ಈ ತಿಂಗಳಲ್ಲಿ ಹೆಚ್ಚಿನ ಹಬ್ಬಗಳು ಬರುವುದರಿಂದ ಮತ್ತು ಸರ್ಕಾರಿ ರಜೆಗಳು ಹೆಚ್ಚಾಗಿರುವುದರಿಂದ ಪ್ರವಾಸಿಗರು ದಂಡು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ ತಿಂಗಳ ತುಲಾ ಸಂಕ್ರಮಣ(ಅ.17)ದಂದು ತೀರ್ಥೋದ್ಭವವಾಗುವುದು ಎಲ್ಲರಿಗೂ ತಿಳಿದ ವಿಚಾರವೇ. ಈ ಬಾರಿ ಸಂಜೆ 7.21ಕ್ಕೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವವಾಗಲಿದೆ.

ಪುರಾಣದ ಪ್ರಕಾಋ ಕೊಡಗಿನ ಬ್ರಹ್ಮಗಿರಿಬೆಟ್ಟ ಶ್ರೇಣಿಯಲ್ಲಿರುವ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಮೈಸೂರು ಜಿಲ್ಲೆಗಾಗಿ ಹಾಸನದ ಮೂಲಕ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕಾವೇರಿ ನದಿ ಉಗಮದ ಬಗೆಗಿನ ಪುರಾಣದ ಕಥೆಯನ್ನು ನೋಡುವುದಾದರೆ ಕವೇರನ ಮಾನಸ ಪುತ್ರಿ ಕಾವೇರಿಯನ್ನು ಅಗಸ್ತ್ಯ ಮುನಿಗಳು ವಿವಾಹವಾಗುತ್ತಾರೆ. ಈ ವೇಳೆ ಕಾವೇರಿ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು ಒಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಷರತ್ತು ವಿಧಿಸುತ್ತಾಳೆ. ಅದಕ್ಕೆ ಅಗಸ್ತ್ಯ ಮುನಿಗಳು ಒಪ್ಪಿಗೆ ನೀಡುತ್ತಾರೆ.

ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದುಕೊಳ್ಳುತ್ತಾರೆ. ಆದರೆ ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ. ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿಯುತ್ತಾಳೆ. ತಾನು ಕೊಟ್ಟ ಮಾತಿನಂತೆ ಕಾವೇರಿ ಪ್ರತಿವರ್ಷ ತೀರ್ಥ ರೂಪದಲ್ಲಿ ದರ್ಶನ ನೀಡುತ್ತಾಳೆ ಎಂಬುದು ನಂಬಿಕೆಯಾಗಿದೆ.

ಇನ್ನು ಜಿಲ್ಲೆಯ ಕೆಲವೆಡೆ ಕಾಡಿನಲ್ಲಿ ಸಿಗುವ ಬೊತ್ತು(ಬೆಚ್ಚು) ಎಂಬ ಸಸ್ಯದ ಕಾಂಡವನ್ನು ತಂದು ಅದಕ್ಕೆ ಕಾಡಿನಲ್ಲೇ ಸಿಗುವ ಬೆಚ್ಚು ಬಳ್ಳಿಯನ್ನು ಸಿಕ್ಕಿಸಿ ಗದ್ದೆಗೆ ನೆಡಲಾಗುತ್ತಿದ್ದು, ತೀರ್ಥೋಬ್ಧವದ ಬಳಿಕ ಅಂದರೆ ಅ.18ರಂದು ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ಭತ್ತದ ಗದ್ದೆಯಲ್ಲಿ ದೋಸೆಯಿಟ್ಟು ದೀಪಹಚ್ಚಿ ಬೆಳೆಚೆನ್ನಾಗಿ ಬೆಳೆದು ಫಸಲು ಬರಲಿ ಎಂದು ಪ್ರಾರ್ಥಿಸಿಕೊಳ್ಳಲಾಗುತ್ತದೆ.

ಗದ್ದೆಗೆ ಬೊತ್ತು ನೆಡುವ ಸಂಪ್ರದಾಯದ ಬಗ್ಗೆ ಹಿರಿಯರು ಹಲವು ರೀತಿಯ ದಂತಕಥೆಗಳನ್ನು ಹೇಳುತ್ತಾರೆ. ಅದೇನೆಂದರೆ ದ್ವಾಪರಯುಗದಲ್ಲಿ ಪಾಂಡವರು ವನವಾಸಕ್ಕೆ ತೆರಳುವ ಮುನ್ನ ಜಾಗವನ್ನು ಕಾವೇರಮ್ಮನಿಗೆ ನೀಡಿ ಹೋಗಿದ್ದರೆಂದು, ಮರಳಿ ಬಂದಾಗ ಇಲ್ಲಿನ ಕೊಡವರು ಭತ್ತದ ನಾಟಿ ಮಾಡಿ ಬೊತ್ತು ನೆಟ್ಟಿದ್ದರಂತೆ. ಹೀಗಾಗಿ ಈ ಬಾರಿ ಬೊತ್ತು ನೆಟ್ಟಿದ್ದೇವೆ ಮುಂದಿನ ಬಾರಿ ಬನ್ನಿ ಎಂದು ಕಳುಹಿಸಿದ್ದರೆಂದೂ ಅದೇ ಪ್ರತಿಭಾರಿಯೂ ನಡೆಯುತ್ತಾ ಬಂತೆಂದೂ ಹೇಳುತ್ತಾರೆ ಮತ್ತೆ ಕೆಲವರು ವನವಾಸಕ್ಕೆ ತೆರಳುವ ಮುನ್ನ ಗುರುತಿಗಾಗಿ ಪಾಂಡವರು ಬೊತ್ತು ಚುಚ್ಚಿ ಹೋದರೆಂದೂ ಹೇಳುತ್ತಾರೆ.


Spread the love