ತುಳು ಭಾಷೆಗೆ ರಾಜ್ಯಭಾಷಾ ಸ್ಥಾನ – ಡಾ.ಪದ್ಮರಾಜ್ ಹೆಗ್ಡೆ ಸಂತಸ

Spread the love

ತುಳು ಭಾಷೆಗೆ ರಾಜ್ಯಭಾಷಾ ಸ್ಥಾನ – ಡಾ.ಪದ್ಮರಾಜ್ ಹೆಗ್ಡೆ ಸಂತಸ

ಉಡುಪಿ: ಬದುಕಿನಲ್ಲಿ ಟಿ.ವಿ.ಯಂತಹ ಪರಿಕರಗಳ ಬಳಕೆ ಹೆಚ್ಚುತ್ತಿರುವುದರಿಂದ, ಜನರು ನಾಟಕದಂತಹ ಕಲೆಗಳಿಂದ ದೂರವಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿಯೂ ಉಡುಪಿ ತುಳುಕೂಟ ಎರಡು ದಶಕಗಳಿಂದ ನಾಟಕೋತ್ಸವವನ್ನು ನಡೆಸುತ್ತಾ ಜನರ ಉಡುಪಿಯ ಅಭಿರುಚಿಯನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ ಹೇಳಿದರು.

ಅವರು ಭಾನುವಾರ ಉಡುಪಿ ತುಳುಕೂಟದ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ 21ನೇ ಕೆಮ್ತೂರು ತುಳು ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.

ವಿಶ್ವದಾದ್ಯಂತ ಇಂದು ಸುಮಾರು 18,50,000 ಮಂದಿ ಮಾತನಾಡುವ ತುಳು ಭಾಷೆಗೆ ಸರ್ಕಾರ ಈಗಲಾದರೂ ರಾಜ್ಯದ 2ನೇ ಭಾಷೆಯ ಮಾನ್ಯತೆ ನೀಡುವುದಕ್ಕೆ ಸಿದ್ದತೆಗಳನ್ನು ನಡೆಸಿದೆ, ಈ ಮೂಲಕ ತುಳುವರ ದಶಕದ ಕನಸು ಈಡೇರುತ್ತಿದೆ ಎಂದವರು ಸಂತಸ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಅತಿಥಿಗಳಾಗಿ ತುಳು ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ದಾನಿ ವಿಶ್ವನಾಥ ಶೆಣೈ, ಉದ್ಯಮಿಗಳಾದ ಪಿ. ಪುರುಷೋತ್ತಮ ಶೆಟ್ಟಿ, ಮನೋಹರ ಶೆಟ್ಟಿ, ಕೆಮ್ತೂರು ಕುಟುಂಬದ ವಿಜಯಕುಮಾರ್ ಶೆಟ್ಟಿ ಆಗಮಿಸಿದ್ದರು

ಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ನಾಟಕ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ ವೇದಿಕೆಯಲ್ಲಿದ್ದರು.

ಕೂಟದ ಉಪಾಧ್ಯಕ್ಷ ದಿವಾಕರ ಸನೀಲ್ ಸ್ವಾಗತಿಸಿದರು, ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದರು.

ಇದೇ ಸಂದರ್ಭದಲ್ಲಿ ಪಪೂ ತರಗತಿಯಲ್ಲಿ ತುಳು ಭಾಷಾ ವಿಷಯದಲ್ಲಿ ಶೇ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮತ್ತು ಉಡುಪಿ ತುಳುಕೂಟದ ನೂತನ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಲಾಯಿತು.


Spread the love