
ತೆಂಕನಿಡಿಯೂರು: ಕೋರಂ ಕೊರತೆಯಿಂದ ಗ್ರಾಮ ಸಭೆ ರದ್ದು – ಸಾರ್ವಜನಿಕರ ಆಕ್ರೋಶ
ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಕೋರಂ ಕೊರತೆಯ ಹಿನ್ನಲೆಯಲ್ಲಿ ಗ್ರಾಮ ಸಭೆಯನ್ನು ರದ್ದುಪಡಿಸಿರುವುದು ಪಂಚಾಯತ್ ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮಾಜಿ ತಾಪಂ ಸದಸ್ಯ ಧನಂಜಯ ಕುಂದರ್ ಹಾಗೂ ಸ್ಥಳೀಯರಾದ ರಮೇಶ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ಡಿಸೆಂಬರ್ 28 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವುದಾಗಿ ಪಂಚಾಯತ್ ಆಡಳಿತ ಪ್ರಕಟಣೆ ನೀಡಿದ್ದು ಬಿಟ್ಟರೆ ಗ್ರಾಮದ ಜನರಿಗೆ ಸೂಕ್ತ ರೀತಿಯಲ್ಲಿ ಪ್ರಚಾರ ಮಾಡಿ ಸಭೆಗೆ ಹಾಜರಾಗುವಂತೆ ಮಾಡಲು ಪಂಚಾಯತ್ ಆಡಳಿತ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗಳನ್ನು ಅರಿಯಲು ಆಯೋಜಿಸಿದ್ದ ಸಭೆಯಲ್ಲಿ ಗ್ರಾಮಸ್ಥರೇ ಇಲ್ಲದೆ ಗ್ರಾಮಪಂಚಾಯತ್ ಇತಿಹಾಸದಲ್ಲೇ ಮೊದಲ ಬಾರಿಗೆ ಸಭೆಯನ್ನು ರದ್ದುಗೊಳಿಸಿರುವುದು ನಾಚಿಕೇಗೆಡಿನ ಸಂಗತಿಯಾಗಿದೆ. ಜನರ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವ ಪಂಚಾಯತ್ ಆಡಳಿತದ ವರ್ತನೆ ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.