
ತೆಂಕನಿಡಿಯೂರು ಗ್ರಾಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
ಉಡುಪಿ: ತೆಂಕನಿಡಿಯೂರು ಗ್ರಾಮದ ಬೆಳ್ಕಲೆ, ಈಶ್ವರನಗರ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಜ್ಯೋತಿ ಕಾರ್ಯಕ್ರಮದ ಅಡಿಯಲ್ಲಿ ಪ್ರತೀ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಗೃಹಲಕ್ಷಿತ್ರ್ಮ ಯೋಜನೆಯ ಅಡಿಯಲ್ಲಿ ಪ್ರತೀ ಮನೆಯ ಯಜಮಾನಿ ಮಹಿಳೆಯ ಖಾತೆಗೆ ಮಾಸಿಕ 2 ಸಾವಿರ ರೂ. ನಗದು ಜಮೆ ಮಾಡಲಾಗುತ್ತದೆ. ಪ್ರತೀ ಬಿಪಿಎಲ್ ಕುಟುಂಬದ ಪ್ರತೀ ವ್ಯಕ್ತಿಗೂ ತಲಾ 10 ಕೆ.ಜಿ. ಉಚಿತ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. 2 ಸಾವಿರ ರೂ. ನಗದು ನೀಡುವುದಕ್ಕೆ ನಿರ್ದಿಷ್ಟ ಉದ್ದೇಶವಿದೆ. 500 ರೂ. ಗ್ಯಾಸ್ ಸಿಲಿಂಡರ್ ದರ ಹೆಚ್ಚಳಕ್ಕೆ ಪರಿಹಾರ, 500 ರೂ. ಜಿಎಸ್ಟಿ ಪರಿಹಾರ, ಉಳಿದ 1 ಸಾವಿರ ರೂ. ಆವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಪರಿಹಾರವಾಗಿದೆ. 3 ಗ್ಯಾರಂಟಿಗಳನ್ನು ಕಾರ್ಡ್ನಲ್ಲಿ ಬರೆದು ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಸಹಿ ಹಾಕಿದ ಕಾರ್ಡ್ ಇದಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಈ ಭರವಸೆ ಜಾರಿಗೆ ಬರಲಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಲು ಗ್ಯಾರಂಟಿ ಕಾರ್ಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ವೆಂಕಟೇಶ್ ಕುಲಾಲ್, ನಾಯಕರಾದ ನಾರಾಯಣ ಅಂಚನ್, ನಿತೀಶ್ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.