ತೆಂಕುತಿಟ್ಟಿನ ಅಗ್ರಮಾನ್ಯ ಬಲಿಪ ನಾರಾಯಣ ಭಾಗವತ ನಿಧನ

Spread the love

ತೆಂಕುತಿಟ್ಟಿನ ಅಗ್ರಮಾನ್ಯ ಬಲಿಪ ನಾರಾಯಣ ಭಾಗವತ ನಿಧನ

ಮಂಗಳೂರು: ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ ಬಲಿಪ ನಾರಾಯಣ ಭಾಗವತ (85) ವಯೋಸಹಜವಾಗಿ ಇಂದು ಸಂಜೆ ಗಂಟಾಲಕಟ್ಟೆಯ ಸ್ವಗೃಹದಲ್ಲಿ ನಿಧನ ಹೊಂದಿದರು.

ಅಜ್ಜ ಬಲಿಪರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದ ಬಲಿಪರು ಕಟೀಲು ಮೇಳದಲ್ಲಿ ಸುದೀರ್ಘ ನಾಲ್ಕುವರೆ ದಶಕಗಳ ಕಾಲ ಸೇವೆಗೈದಿದ್ದರು.

ತಮ್ಮ ಕಂಚಿನ ಕಂಠ ಮತ್ತು ರಂಗ ನಡೆಯಿಂದ ಪ್ರಸಿದ್ಧರಾಗಿದ್ದರು. ಹಲವು ಯಕ್ಷಗಾನ ಪ್ರಸಂಗಗಳು ಕಂಠಸ್ಥವಾಗಿದ್ದವು. ಪ್ರಸಂಗಕರ್ತರಾಗಿಯೂ ಖ್ಯಾತರಾಗಿದ್ದರು.

ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಾಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಪದ್ಯಗಳಿಗೆ ತನ್ನ ಪರಿಪೂರ್ಣ ಯಕ್ಷಗಾನೀಯ ಶೈಲಿಯ ಏರು ಸ್ವರದ ಭಾಗವತಿಕೆಯ ಮೂಲಕ ಪರಿಪೂರ್ಣ ನ್ಯಾಯ ಒದಗಿಸಿಕೊಟ್ಟವರು ಬಲಿಪ ಭಾಗವತರು.

ಬಲಿಪ ನಾರಾಯಣ ಭಾಗವತರು 60ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಯಕ್ಷಗಾನ ಕಲಾ ಸೇವೆ ಸಲ್ಲಿಸಿದ್ದಾರೆ. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿದ್ದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪ ಭಾಗವತರಿಗಿತ್ತು.30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.

ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯುತ್ತಿದ್ದರು.ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ.ಬಲಿಪ ನಾರಾಯಣ ಭಾಗವತರು ”ಐದು ದಿನದ ದೇವೀ ಮಹಾತ್ಮೆ” ಎಂಬ ಮಹಾಪ್ರಸಂಗವನ್ನು ರಚಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಮಹತ್ವದ ಕೃತಿಯಾಗಿ ಮೂಡಿ ಬಂದಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾವಿರಾರು ಸನ್ಮಾನಗಳು ಅವರಿಗೆ ಸಂದಿದ್ದವು.


Spread the love