ತೆಂಗು-ಅಡಿಕೆ ಗಿಡ ನಾಶ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು

Spread the love

ತೆಂಗು-ಅಡಿಕೆ ಗಿಡ ನಾಶ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು

ಮಂಡ್ಯ: ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ತೆಂಗು ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿ ವಿಕೃತಿ ಮೆರೆದಿರುವ ಘಟನೆ  ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ರಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ರಾಮನಕೊಪ್ಪಲು ಗ್ರಾಮದ ನಿವಾಸಿ ಚಂದ್ರಪ್ಪ ಮತ್ತು ಅವರ ಪಕ್ಕದ ಜಮೀನಿನ ಕುಮಾರ, ಶಿವಣ್ಣ, ಸುರೇಶ, ಶಾಂತಕುಮಾರ್ ಎಂಬುವರ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಸುಮಾರು ನೂರಕ್ಕೂ ಹೆಚ್ಚು ಅಡಿಕೆ ಗಿಡಗಳು ಮತ್ತು ನೂರೈವತ್ತಕ್ಕೂ ಹೆಚ್ಚಿನ ತೆಂಗಿನ ಗಿಡಗಳನ್ನು ನಾಶಪಡಿಸಿದ್ದಾರೆ, ಮೊದಲಿಗೆ ಚಂದ್ರಪ್ಪನ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಸಸಿ ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸಿರುವ ದುಷ್ಕರ್ಮಿಗಳು ನಂತರ ಪಕ್ಕದ ಜಮೀನಿನಲ್ಲಿ ಅಳವಡಿಸಿದ್ದ ತುಂತುರು ನೀರಾವರಿಯ ಪೈಪುಗಳು, ಮೋಟಾರು ಕೇಬಲ್‌ಗಳನ್ನು ಕದ್ದೊಯ್ದಿದ್ದಾರೆ. ಜೊತೆಗೆ ತೆಂಗಿನ ಗಿಡಗಳ ಸುಳಿಗಳನ್ನು ಮುರಿದಿದ್ದಾರೆ.

ಶಿವಣ್ಣ, ಸುರೇಶ, ಕುಮಾರ ಎಂಬ ರೈತರ ಜಮೀನಿನ ಮೋಟಾರು ಬೋರ್ಡ್, ಕೇಬಲ್ ವೈರ್‌ಗಳ ಜೊತೆಗೆ ತೆಂಗಿನ ಸಸಿ, ಅಡಕೆ ಗಿಡಗಳನ್ನು ನಾಶಪಡಿಸಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೇವೆ. ಸಾಲ ಮಾಡಿ ಇರುವ ಜಮೀನುಗಳನ್ನು ಅಚ್ಚುಕಟ್ಟು ಮಾಡಿ ತೆಂಗು ಮತ್ತು ಅಡಿಕೆ ಸಸಿಗಳನ್ನು ನೆಟ್ಟಿದ್ದ  ನಮಗೆ ಈ ದುಷ್ಕುತ್ಯದಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದ್ದು,  ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಸೂಕ್ತ ನ್ಯಾಯ ದೊರಕಿಸಿಕೊಡಿ ಎಂದು ನಷ್ಟಕ್ಕೊಳಗಾದ ರೈತರು ಆಗ್ರಹಿಸಿದ್ದಾರೆ. ಈ  ಸಂಬಂಧ ರಾಮನ ಕೊಪ್ಪಲು ಗ್ರಾಮದ ಚಂದ್ರಪ್ಪ ಅವರು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Spread the love