ತೆಳ್ಳನೂರು ಗ್ರಾಮದಲ್ಲಿ ನೀರಿಗಾಗಿ ಜನರ ಪರದಾಟ

Spread the love

ತೆಳ್ಳನೂರು ಗ್ರಾಮದಲ್ಲಿ ನೀರಿಗಾಗಿ ಜನರ ಪರದಾಟ

ಚಾಮರಾಜನಗರ: ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ತೆಳ್ಳನೂರು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರಿಲ್ಲದೆ ಜನ ಪರದಾಡುವಂತಾಗಿದ್ದು, ಜನ ಹಿಡಿಶಾಪ ಹಾಕುತ್ತಿದ್ದಾರೆ.

ಇಷ್ಟಕ್ಕೂ ಮಳೆಗಾಲದಲ್ಲಿ ಉತ್ತಮವಾಗಿ ಮಳೆಬಂದಿದ್ದರೂ ನೀರಿಗಾಗಿ ಜನ ಪರದಾಡುವಂತಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ತೆಳ್ಳನೂರು ಗ್ರಾಮದಲ್ಲಿ ನೀರಿಗೆ ಸಮಸ್ಯೆ ಆಗಿರುವುದು ಅಂತರ್ಜ‍ಲದ ಕೊರತೆಯಿಂದಲ್ಲ. ಬದಲಿಗೆ ವಿದ್ಯುತ್ ಸಮಸ್ಯೆಯಿಂದ ಎಂದರೆ ಅಚ್ಚರಿಯಾಗಬಹುದು. ಈ ಹಿಂದೆ ಮಳೆಯಿಲ್ಲದೆ ಜನ ನೀರಿಗಾಗಿ ಪರದಾಡುತ್ತಿದ್ದರು. ಆದರೆ ಈಗ ಮಳೆ ಉತ್ತಮವಾಗಿ ಆಗಿರುವುದರಿಂದ ನೀರಿಗೆ ಯಾವುದೇ ತೊಂದರೆಯಿಲ್ಲ. ಬದಲಿಗೆ ವಿದ್ಯುತ್ ಸಮಸ್ಯೆಯಿಂದ ಜನ ನೀರಿಲ್ಲದೆ ಪರದಾಡುವಂತಾಗಿದೆ.

ಗ್ರಾಮಕ್ಕೆ ನಾಲ್ಕು ದಿನಗಳಿಂದ ನೀರು ಸರಬರಾಜಾಗುತ್ತಿಲ್ಲ ಎಂದರೆ ಜನರ ಪರಿಸ್ಥಿತಿ ಹೇಗಿರಬಹುದು ನೀವೇ ಊಹಿಸಿ. ಜನ ಇವತ್ತು ಸರಿಹೋಗಬಹುದು, ನಾಳೆ ಸರಿಹೋಗಬಹುದೆಂದು ಕಾಯುತ್ತಲೇ ಇದ್ದಾರೆ. ಅಷ್ಟೇ ಅಲ್ಲದೆ ಊರಿನ ಕೆರೆ ಬಾವಿಯನ್ನು ಹುಡುಕಿಕೊಂಡು ಕೊಡ ಹಿಡಿದು ಹೋಗುವಂತಾಗಿದೆ.

ಗ್ರಾಮದಲ್ಲಿ ಜನ ನೀರಿಲ್ಲದೆ ಪರದಾಡುತ್ತಿದ್ದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಒಮ್ಮೆಯೂ ತಿರುಗಿ ನೋಡಿಲ್ಲ, ಇಲ್ಲಿನ ಚುನಾಯತ ಸದಸ್ಯರ ಗಮನಕ್ಕೆ ಸಾರ್ವಜನಿಕರು ನೀರಿನ ಸಮಸ್ಯೆ ಬಗ್ಗೆ ವಿವರಣೆ ನೀಡಿದರೆ ವಿದ್ಯುತ್ ವ್ಯತ್ಯಾಸದಿಂದ ಮೋಟಾರ್ ದುರಸ್ತಿಗೀಡಾಗಿದೆ. ಹಾಗಾಗಿ ನೀರಿನ ಸಮಸ್ಯೆಯಾಗುತ್ತಿದೆ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಯಾರಿಗೂ ಮೋಟಾರ್ ಸರಿಪಡಿಸಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮನಸ್ಸು ಇಲ್ಲದಂತಾಗಿದೆ.

ಜನ ಸುಮಾರು ಒಂದು ಕಿಲೋಮೀಟರ್ ದೂರ ಹೋಗಿ ನೀರು ತಂದು ಬಳಸುತ್ತಿರುವುದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಗ್ರಾಮಸ್ಥರು ಪ್ರಶ‍್ನಿಸುತ್ತಿದ್ದಾರೆ. ಆದರೂ ಚುನಾಯಿತ ಸದಸ್ಯರ ನೀರಿನ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಮಹಾ ಶಿವರಾತ್ರಿ ಹಬ್ಬವಿದ್ದರೂ ನೀರಿನ ಹಾಹಾಕಾರ ಮಾತ್ರ ತಪ್ಪಿಲ್ಲ ಎಂದು ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕುಡಿಯುವ ನೀರಿಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದೆ ಆದರೆ ಪಂಚಾಯ್ತಿ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.


Spread the love