ತ್ಯಾಜ್ಯ ವಿಲೇವಾರಿಗೆ ನಿರ್ವಹಣ ಕೇಂದ್ರ ಉಪಯುಕ್ತ ಪರಿಹಾರ: ವಿ. ಸುನಿಲ್ ಕುಮಾರ್

Spread the love

ತ್ಯಾಜ್ಯ ವಿಲೇವಾರಿಗೆ ನಿರ್ವಹಣ ಕೇಂದ್ರ ಉಪಯುಕ್ತ ಪರಿಹಾರ: ವಿ. ಸುನಿಲ್ ಕುಮಾರ್

ಮಂಗಳೂರು: ಇತ್ತೀಚೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ತ್ಯಾಜ್ಯ ವಿಲೇವಾರಿಗೆ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಘಟಕಗಳ (ಎಂ.ಆರ್.ಎಫ್. ಕೇಂದ್ರ) ಸ್ಥಾಪನೆ ಅತ್ಯುತ್ತಮ ಪರಿಹಾರವಾಗಿವೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ‌ ಸುನಿಲ್ ಕುಮಾರ್ ಅವರು ಅಭಿಪ್ರಾಯ ಪಟ್ಟರು.

ಅವರು ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಎಡಪದವು ಗ್ರಾಮ ಪಂಚಾಯತ್ ನ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ನಿರ್ಮಾಣವಾದ ಸಮಗ್ರ ಘನತಾಜ್ಯ ನಿರ್ವಹಣಾ ಕೇಂದ್ರವನ್ನು ಜ.26ರ ಗುರುವಾರ ತೆಂಕ ಎಡಪದವಿನಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ತ್ಯಾಜ್ಯ ವಿಲೇವಾರಿ ಇತ್ತೀಚೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ನೂರಾರು ಅಭಿವೃದ್ಧಿ ಕಾಮಗಾರಿಗಳು ಸಾವಿರಾರು ಕೋಟಿ ರೂ.ಗಳಲ್ಲಿ ಆಗುವ ಸಂದರ್ಭಗಳಲ್ಲಿ ಹಾಗೂ ಸಾರ್ವಜನಿಕರು ಬಳಸಿದ ಕಸವನ್ನು ರಸ್ತೆ, ನದಿ, ಶಾಲೆಗಳ ಆವರಣ ಅಥವಾ ಖಾಲಿ ಜಾಗದಲ್ಲಿ ಹಾಕಲಾಗುತ್ತದೆ, ಅದರ ವಿಲೇವಾರಿಗೆ ಸೂಕ್ತ ವ್ಯವಸ್ಥಿತ ಯೋಜನೆ ಇರಲಿಲ್ಲ, ಅದನ್ನ ಮನಗಂಡ ಕೇಂದ್ರ ಸರ್ಕಾರವು ಈ ಬಗ್ಗೆ ಚಿಂತಿಸಿ ಈ ಘಟಕಗಳ ಆರಂಭಿಸಿತು, ಪ್ರಾರಂಭದಲ್ಲಿ ಇದಕ್ಕೆ ಜನ ವಿರೋಧವು ವ್ಯಕ್ತವಾಯಿತು, ಎಂ ಆರ್ ಎಫ್ ಕೇಂದ್ರಗಳಲ್ಲಿ ಒಣ ತ್ಯಾಜ್ಯವನ್ನು ವಿಂಗಡಣೆ ಮಾಡುವ ಮೂಲಕ ನಿರ್ವಹಣೆ ಮಾಡಲಾಗುವುದು, ಇಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಉದ್ಯೋಗ ನೀಡಲಾಗುವುದು, ಈ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಇದರಿಂದ ಕಸ ಉತ್ಪಾದನೆ ಪ್ರಮಾಣವು ಕಡಿಮೆ ಮಾಡುವ ಮನೋಭಾವ ಅವರಲ್ಲಿ ಉಂಟಾಗಬಹುದು, ಒಟ್ಟಾರೆ ತಾಲೂಕುಗಳ ಸ್ವಚ್ಛತೆಗೆ ಹಾಗೂ ಅಕ್ಕಪಕ್ಕದ ನೂರಾರು ಗ್ರಾಮಗಳ ಸ್ವಚ್ಛತೆಗೆ ಈ ರೀತಿಯ ತ್ಯಾಜ್ಯ ನಿರ್ವಹಣಾ ಘಟಕಗಳು ಅತ್ಯುತ್ತಮ ಮಾರ್ಗವಾಗಿವೆ ಎಂದು ಸಚಿವರು ಹೇಳಿದರು.

ಜಿಲ್ಲೆಯ ಮೊದಲ ಎಂ ಆರ್ ಎಫ್ ಘಟಕವಾಗಿದ್ದು ಗ್ರಾಮೀಣ ಭಾಗದಲ್ಲಿ ವಿಶೇಷ ಪ್ರಯತ್ನದಿಂದ ಇದು ಆರಂಭಗೊಂಡಿದೆ, ಕಾರ್ಕಳದಲ್ಲಿ ತಮ್ಮ ಮನೆಯ ಸಮೀಪದಲ್ಲೇ ಈ ರೀತಿಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ ಕಾರ್ಯಾಚರಿಸುತ್ತಿದ್ದು ಅದರಿಂದ ಯಾವುದೇ ರೀತಿಯ ತೊಂದರೆಗಳು ಎದುರಾಗಿಲ್ಲ ಎಂದರು.

ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ರಾಜ್ಯದಲ್ಲಿ ಎರಡನೇ ಘಟಕ ಇದಾಗಿದೆ, ಪ್ರಧಾನ ಮಂತ್ರಿಗಳ ಇಚ್ಛಾಶಕ್ತಿಯಿಂದಾಗಿ ಸ್ವಚ್ಛ ಭಾರತ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ, ಮಹಾತ್ಮ ಗಾಂಧಿಯವರು ಕಂಡ ಕನಸು ಇದೀಗ ನನಸಾಗಿ ಸ್ವಚ್ಛ ಭಾರತ ರೂಪುಗೊಳ್ಳುತ್ತಿದೆ ಎಂದು ಹೇಳಿದರು.

ಘನ ತ್ಯಾಜ್ಯ ವಿಲೇವಾರಿಗೆ ಜಾಗೃತಿ ಕೊರತೆಯಿಂದಾಗಿ ಸಮಸ್ಯೆಗಳಾಗುತ್ತಿದ್ದವು, ಆರಂಭದಲ್ಲಿ ಕೇಂದ್ರದ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿತ್ತು, ಘನ ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಇಲ್ಲಿ ಆಗಲಿದೆ, ಸ್ಥಳೀಯರಿಗೆ 80% ರಷ್ಟು ಉದ್ಯೋಗ ನೀಡಲಾಗುವುದು, ಒಣ ತ್ಯಾಜ್ಯವನ್ನು ಸಮರ್ಪಕವಾಗಿ ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.

ನರಿಕೊಂಬು, ಕೇದಂಬಾಡಿ ಹಾಗೂ ಉಜಿರೆ ಗ್ರಾಮಗಳಲ್ಲಿಯೂ ಘಟಕ ಆರಂಭಗೊಳ್ಳಲಿದ್ದು ಆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸುವುದಿಲ್ಲ ಮುಂಬರುವ ಫೆಬ್ರವರಿಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಉದ್ಘಾಟನೆ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಭರತ್ ಶೆಟ್ಟಿ ಅವರು ಮಾತನಾಡಿ, ಈ ಕೇಂದ್ರದಲ್ಲಿ ಒಣಕಸ ವಿಂಗಡಣೆ ಮಾಡಲಾಗುವುದು, ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಉದ್ಯೋಗ ನೀಡಲಾಗುವುದು, ಒಣತ್ಯಾಜ್ಯ ನಿರ್ವಹಣೆ ಆದ ಕಾರಣ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಇದರ ವೀಕ್ಷಣೆಗೆ ಅವಕಾಶ ನೀಡಬೇಕು ಇದರಿಂದ ಸಾರ್ವಜನಿಕರು ಹಾಗೂ ಮಕ್ಕಳಲ್ಲಿ ತ್ಯಾಜ್ಯ ಕಡಿಮೆ ಮಾಡುವ ಕಲ್ಪನೆ ಮೂಡುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷರಾದ ಪ್ರೇಮ, ಬೆಂಗಳೂರಿನ ಸಾಹಸ್ ವೇಸ್ಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಅರ್ಚನಾ ತ್ರಿಪಾಠಿ, ಮಂಗಳೂರು ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ನ ಆಡಳಿತ ನಿರ್ದೇಶಕ ದಿಲ್ ರಾಜ್ ಆಳ್ವಾ, ಮಂಗಳೂರು ಎಂ ಸಿ ಎಫ್ ಮುಖ್ಯ ಉತ್ಪಾದಕ ಅಧಿಕಾರಿ ಗಿರೀಶ್ ಹಾಗೂ ಇತರರು ವೇದಿಕೆಯಲ್ಲಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಜಿ. ನರೇಂದ್ರಬಾಬು ವಂದಿಸಿದರು.


Spread the love