ತ್ಯಾಜ್ಯ ವಿಲೇವಾರಿ ವ್ಯತ್ಯಯ: ಮ.ನ.ಪಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Spread the love

ತ್ಯಾಜ್ಯ ವಿಲೇವಾರಿ ವ್ಯತ್ಯಯ: ಮ.ನ.ಪಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೊರಗುತ್ತಿಗೆ ಆಧಾರಿತ ಪೌರ ಕಾರ್ಮಿಕರು ನಡೆಸುತ್ತಿರುವ ಮುಷ್ಕರದ ಪರಿಣಾಮ ಕಳೆದ 10 ದಿನಗಳಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಪೌರ ಕಾರ್ಮಿಕರ ಸಮಸ್ಯೆಗೆ ಪರಿಹಾರ, ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಮಂಗಳೂರು ಪ್ರತಿಪಕ್ಷ ಕಾಂಗ್ರೆಸ್, ಮಂಗಳೂರು ದಕ್ಷಿಣ ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಮ.ನ.ಪಾ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ರಸ್ತೆಯ ಉದ್ದಗಲಕ್ಕೂ ಮನೆಯ ತ್ಯಾಜ್ಯವನ್ನು ಬಿಸಾಡುವ ಸನ್ನಿವೇಶ ಎದುರಾಗಿದೆ. ತೆರವಾಗದ ತ್ಯಾಜ್ಯಗಳಿಂದ ಗಬ್ಬು ವಾಸನೆ ನಾರುತ್ತಿದ್ದು, ನಗರದ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಶಾಸಕರು, ಮ.ನ.ಪಾ ಆಡಳಿತಾಧಿಕಾರಿಗಳು ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಎಲ್ಲ ಬಗೆಯ ಹೊರಗುತ್ತಿಗೆ ನೌಕರರ ಸಮಸ್ಯೆ ಇತ್ಯರ್ಥಪಡಿಸಲು ಸರ್ಕಾರ, ಮ.ನ.ಪಾ ವಿಫಲವಾಗಿದೆ ಎಂದು ದೂರಿದರು.

ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ ಮಾತನಾಡಿ, ಬೀದಿ ಬೀದಿಗಳಲ್ಲಿ ತ್ಯಾಜ್ಯ ರಾಶಿಗಳು ಗುಡ್ಡೆಗಳಾಗಿ ಪರಿಣಮಿಸಿದ್ದು, ತೆರವು ಕಾರ್ಯ ಇನ್ನೂ ಕೂಡ ನಡೆದಿಲ್ಲ. ಇನ್ನೊಂದೆಡೆ ಒಳಚರಂಡಿ ಸಮಸ್ಯೆ ಬಿಗಡಾಯಿಸಿದ್ದು, ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಮ್ಯಾನ್ ಹೋಲ್ ಗಳಲ್ಲಿ ಒಳಚರಂಡಿ ನೀರು ಸೋರಿಕೆಯಾಗಿ ಮುಖ್ಯ ರಸ್ತೆಗಳಲ್ಲಿ ಹರಿದು ಹೋಗುತ್ತಿದೆ. ಪದಾಚಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೌರ ಕಾರ್ಮಿಕರ ಮನವೊಲಿಸಲು ಆಸಕ್ತಿ ವಹಿಸಲಿ ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಶಶಿಧರ ಹೆಗ್ಡೆ, ಶಾಲೆಟ್ ಪಿಂಟೊ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ರವೂಫ್, ಪ್ರವೀಣ್ ಚಂದ್ರ ಆಳ್ವ, ಭಾಸ್ಕರ್ ಕೆ, ಲಾನ್ಸಿ ಲೋಟೊ ಪಿಂಟೋ, ಝಿನತ್ ಸಂಸುಂದ್ದಿನ್ ಬಂದರ್, ಅನಿಲ್ ಕುಮಾರ್, ಸಂಶುದ್ದೀನ್ ಕುದ್ರೋಳಿ, ಕೇಶವ ಮರೋಳಿ, ಬಿ.ಜಿ.ಸುವರ್ಣ, ಅಬ್ದಲ್ ಲತೀಫ್, ಅಶ್ರಫ್ ಕೆ.ಇ, ಲಾರೆನ್ಸ್ ಡಿ’ಸೋಜ, ಸಂತೋಷ್ ಕುಮಾರ್ ಶೆಟ್ಟಿ, ಎಂ.ಜಿ ಹೆಗ್ಡೆ, ಪದ್ಮನಾಭ ಅಮೀನ್, ನಝೀರ್ ಬಜಾಲ್, ಮಂಜುಳಾ ನಾಯಕ್, ಡಿ.ಕೆ ಅಶೋಕ್ ಕುಮಾರ್, ಚೇತನ್ ಕುಮಾರ್, ವಾಹಾಬ್ ಕುದ್ರೋಳಿ, ಅದ್ದು ಕೃಷ್ಣಾಪುರ, ಡಿ.ಎಂ ಅಸ್ಲಾಂ, ಶಾಂತಲಾ ಗಟ್ಟಿ, ಗಿರೀಶ್ ಶೆಟ್ಟಿ, ಚೇತನ್ ಬೆಂಗ್ರೆ, ಸಲೀಂ ಪಾಂಡೇಶ್ವರ, ಸುನೀಲ್ ಪೂಜಾರಿ, ರಾಕೇಶ್ ದೇವಾಡಿಗ, ಯೋಗೇಶ್ ನಾಯಕ್, ಸಮರ್ಥ್ ಭಟ್, ಮೀನಾ ಟೆಲ್ಲಿಸ್, ಡಿ.ಎಂ. ಮುಸ್ತಫಾ, ಮೊದಲಾವರು ಉಪಸ್ಥಿತರಿದ್ದರು.


Spread the love