ದಕ್ಷಿಣ ಕನ್ನಡ ಜಿಲ್ಲೆಯ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ಆಕ್ಷೇಪ: ಜನಮತ ಸಂಗ್ರಹಕ್ಕೆ ಜಯಪ್ರಸಾದ್ ಜೋಶಿ ಆಗ್ರಹ
ಬೆಳ್ಳಾರೆ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಾಯಿಸುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆಗೆ ಬೆಳ್ಳಾರೆ ಬಳಕೆದಾರರ ವೇದಿಕೆಯ ಸಂಚಾಲಕ ಜಯಪ್ರಸಾದ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸುದೀರ್ಘ ಆಕ್ಷೇಪಣಾ ಪತ್ರ ಸಲ್ಲಿಸಿರುವ ಅವರು, ಮರುನಾಮಕರಣ ಪ್ರಸ್ತಾವನೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.
ಜಿಲ್ಲೆಯ ಹೆಸರನ್ನು ಬದಲಾಯಿಸುವುದರಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ, ಆಡಳಿತಾತ್ಮಕ ಗೊಂದಲ, ಆರ್ಥಿಕ ಹೊರೆ ಹಾಗೂ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಜಯಪ್ರಸಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಕಡತಗಳು, ಕಂದಾಯ ದಾಖಲೆಗಳು, ಕಚೇರಿಗಳ ನಾಮಫಲಕಗಳು ಹಾಗೂ ಸಾರ್ವಜನಿಕರ ಗುರುತಿನ ಚೀಟಿಗಳಲ್ಲಿ ಬದಲಾವಣೆ ಮಾಡಬೇಕಾಗುವುದರಿಂದ ಕೋಟ್ಯಂತರ ರೂಪಾಯಿ ವೆಚ್ಚವಾಗಬಹುದು. ಇದು ಸಾರ್ವಜನಿಕರ ತೆರಿಗೆ ಹಣದ ಅನಗತ್ಯ ವ್ಯಯವಾಗಲಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಹೆಸರು ಬದಲಾವಣೆಯಿಂದ ನ್ಯಾಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಪ್ರಗತಿಯಲ್ಲಿರುವ ಲಕ್ಷಾಂತರ ಕಡತಗಳ ನಿರ್ವಹಣೆಯಲ್ಲಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಗೊಂದಲಗಳು ಉಂಟಾಗಬಹುದು. ಅಂಚೆ ಇಲಾಖೆಯ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಕೇವಲ ಒಂದು ತಾಲೂಕು ಕೇಂದ್ರವಾಗಿದ್ದು, ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಒಂದು ನಗರಕ್ಕೆ ಸೀಮಿತಗೊಳಿಸುವುದು ಸೂಕ್ತವಲ್ಲ ಎಂದು ಜಯಪ್ರಸಾದ್ ಜೋಶಿ ಹೇಳಿದ್ದಾರೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ ಹಾಗೂ ಉಳ್ಳಾಲ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಗ್ರಾಮೀಣ ಜನರ ಪ್ರಾದೇಶಿಕ ಅಸ್ಮಿತೆಯನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯ ಹೆಸರನ್ನು ಬದಲಾಯಿಸುವಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಆಗ್ರಹಿಸಿರುವ ಅವರು, ಕೇವಲ ಪತ್ರಿಕಾ ಪ್ರಕಟಣೆಗಳ ಮೂಲಕ ಆಕ್ಷೇಪಣೆಗಳನ್ನು ಆಹ್ವಾನಿಸುವುದರಿಂದ ಗ್ರಾಮೀಣ ಪ್ರದೇಶದ ಎಲ್ಲ ಜನರಿಗೂ ಮಾಹಿತಿ ತಲುಪುವುದಿಲ್ಲ ಎಂದು ಹೇಳಿದ್ದಾರೆ. ಆಕ್ಷೇಪಣೆಗಳು ಕಡಿಮೆ ಬಂದಿರುವುದನ್ನೇ ಜನರ ಒಪ್ಪಿಗೆ ಎಂದು ಪರಿಗಣಿಸಬಾರದು ಎಂದು ಎಚ್ಚರಿಸಿದ್ದಾರೆ.
ಈ ಪ್ರಸ್ತಾವನೆಯ ಕುರಿತು ಮುಂದುವರಿಯುವ ಮೊದಲು ಜಿಲ್ಲೆಯ ಕನಿಷ್ಠ ಶೇ.90ರಷ್ಟು ಜನರನ್ನು ಒಳಗೊಂಡಂತೆ ಮನೆಮನೆ ಸಮೀಕ್ಷೆ ಅಥವಾ ಅಧಿಕೃತ ಜನಮತ ಸಂಗ್ರಹ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಯಾವುದೇ ಬಲವಾದ ಕಾನೂನು ಅಥವಾ ಆಡಳಿತಾತ್ಮಕ ಕಾರಣಗಳಿಲ್ಲದೆ ಜಿಲ್ಲೆಯ ಹೆಸರನ್ನು ಬದಲಾಯಿಸುವುದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಜಯಪ್ರಸಾದ್ ಜೋಶಿ, ಸರ್ಕಾರವು ಮರುನಾಮಕರಣ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
