ದಕ, ಉಡುಪಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಪ್ಯೂ, ಸೆ. 6ರಿಂದ ಆರರಿಂದ 8ನೇ ತರಗತಿ ಆರಂಭಕ್ಕೆ ಒಪ್ಪಿಗೆ

Spread the love

ದಕ, ಉಡುಪಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಪ್ಯೂ, ಸೆ. 6ರಿಂದ ಆರರಿಂದ 8ನೇ ತರಗತಿ ಆರಂಭಕ್ಕೆ ಒಪ್ಪಿಗೆ

ಬೆಂಗಳೂರು: ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ವಾರಾಂತ್ಯದ ಕರ್ಫ್ಯೂ ಮುಂದುವರಿಯಲಿದೆ. ಉಳಿದ ಜಿಲ್ಲೆಗಳಲ್ಲಿ ಈ ನಿರ್ಬಂಧ ಸಡಿಲಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ತೀರ್ಮಾನಗಳನ್ನು ಪ್ರಕಟಿಸಿದ ಕಂದಾಯ ಸಚಿವ ಆರ್‌. ಅಶೋಕ ಅವರು ಕಲ್ಯಾಣ ಮಂಟಪಗಳಲ್ಲಿ ಮದುವೆ ಮತ್ತಿತರ ಸಮಾರಂಭ ನಡೆಸಲು ಅನುಮತಿ ನೀಡಲಾಗಿದೆ. ಗರಿಷ್ಠ 400 ಜನರ ಮಿತಿಗೆ ಒಳಪಟ್ಟು, ಶೇಕಡ 50ರಷ್ಟು ಜನರಿಗೆ ಅವಕಾಶ ಕಲ್ಪಿಸಿ ಸಭೆ, ಸಮಾರಂಭಗಳನ್ನು ನಡೆಸಲು ಒಪ್ಪಿಗೆ ನೀಡಲಾಗುವುದು ಎಂದು ಪ್ರಕಟಿಸಿದರು.

ಕೇರಳದಿಂದ ಬರುವ ಎಲ್ಲರಿಗೂ ಒಂದು ವಾರಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗುವುದು ಎಂದರು.

ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂಬ ಬೇಡಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತು ಸೆಪ್ಟೆಂಬರ್‌ 5ರಂದು ಮತ್ತೊಮ್ಮೆ ಉನ್ನತಮಟ್ಟದ ಸಭೆ ನಡೆಸಿ, ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಲಾಯಿತು ಎಂದು ಅಶೋಕ ತಿಳಿಸಿದರು.

‘ಗಣೇಶೋತ್ಸವ ಆಚರಣೆ ಭಾವನಾತ್ಮಕ ವಿಚಾರ. ಈ ಕಾರಣದಿಂದ ಬೃಹತ್‌ ಪ್ರಮಾಣದ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳಿಗೆ ಸೂಚಿಸಲಾಗಿದೆ. ವರದಿ ಪಡೆದ ಬಳಿಕ, ಕೋವಿಟಡ್‌ ಪರಿಸ್ಥಿತಿಯನ್ನು ಆಧರಿಸಿ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು’ ಎಂದರು.

ಗಣೇಶೋತ್ಸವದ ವಿಚಾರದಲ್ಲಿ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ. ಆದರೆ, ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಜನರ ಆರೋಗ್ಯ ಮತ್ತು ಪ್ರಾಣ ಕೂಡ ಮುಖ್ಯ. ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೋವಿಡ್‌ ದೃಢಪ್ರಮಾಣದರ ಶೇಕಡ 2ಕ್ಕಿಂತ ಕಡಿಮೆ ಇರುವ ಎಲ್ಲ ತಾಲ್ಲೂಕುಗಳಲ್ಲೂ ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ 6ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು

‘ಪ್ರತಿ ತರಗತಿಯ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಭಜಿಸಿ, ದಿನ ಬಿಟ್ಟು ದಿನ ತರಗತಿ ನಡೆಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗೆ ತರಗತಿಗಳನ್ನು ನಡೆಸಲಿದ್ದು, ಶನಿವಾರ ಮತ್ತು ಭಾನುವಾರ ಶಾಲಾ ತರಗತಿಗಳನ್ನು ಸ್ಯಾನಿಟೈಸ್‌ ಮಾಡಲಾಗುವುದು’ ಎಂದರು.

ಒಂಬತ್ತನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಭೌತಿಕ ತರಗತಿಗಳಿಗೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಶಾಲಾ, ಕಾಲೇಜುಗಳಲ್ಲಿ ಹಾಜರಾತಿ ಕಡಿಮೆ ಇದೆ. ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿರುವ ಪ್ರಕರಣಗಳ ಸಂಖ್ಯೆಯೂ ತೀರಾ ಕಡಿಮೆ ಇದೆ ಎಂದು ತಿಳಿಸಿದರು.

2,912 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. 6,472 ವಿದ್ಯಾರ್ಥಿಗಳ ಗಂಟಲು ಮತ್ತು ಮೂಗಿನ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. 14 ವಿದ್ಯಾರ್ಥಿಗಳಲ್ಲಿ ಮಾತ್ರ ಕೋವಿಡ್‌ ದೃಢಪಟ್ಟಿದೆ ಎಂದು ವಿವರ ನೀಡಿದರು.


Spread the love