ದಚ್ಚುಗೆ ದೋಖಾಕ್ಕೆ ಯತ್ನದ ಪ್ರಕರಣದಲ್ಲಿ ಉಮಾಪತಿ ಹೇಳಿದ್ದೇನು?

Spread the love

ದಚ್ಚುಗೆ ದೋಖಾಕ್ಕೆ ಯತ್ನದ ಪ್ರಕರಣದಲ್ಲಿ ಉಮಾಪತಿ ಹೇಳಿದ್ದೇನು?

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ಲೋನ್ ಗೆ ಯತ್ನಿಸಿದ ಪ್ರಕರಣ ದಿನದಿಂದ ದಿನಕ್ಕೆ ಕವಲು ಹಾದಿಯಲ್ಲಿ ಸಾಗುತ್ತಲೇ ಇದೆ. ದರ್ಶನ್ ಅವರು ಮಾಧ್ಯಮದವರನ್ನು ಕರೆದು ಒಂದಷ್ಟು ಮಾಹಿತಿಯನ್ನು ಹೊರಗೆಡವಿದ ನಂತರ ಅರುಣಕುಮಾರಿ ಹಾಗೂ ಉಮಾಪತಿ ನಡುವಿನ ಸಂಭಾಷಣೆ, ವಾಟ್ಸಪ್ ಚಾಟ್ ಎಲ್ಲವೂ ಬಹಿರಂಗವಾಗಿ ಎಲ್ಲರೂ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಕಡೆಗೆ ನೋಡುವಂತಾಗಿತ್ತು.

ಇದೀಗ ಉಮಾಪತಿ ಅವರು ಬೆಂಗಳೂರಿನ ನಿವಾಸದಲ್ಲಿ ಮಾಧ್ಯಮದವರ ಮುಂದೆ ಕುಳಿತು ಒಂದಷ್ಟು ಮಾತುಗಳನ್ನಾಡಿದ್ದಾರೆ. ಹಾಗಾದರೆ ಅವರು ಏನು ಹೇಳಿದರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾನು ಯಾವುದೇ ತಪ್ಪು ಮಾಡಿಲ್ಲ ನನಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ಮಾಡಿ ನನ್ನ ಮೇಲೆ ಆರೋಪ ಸಾಬೀತಾದರೆ ಶಿಕ್ಷೆ ಕೊಡಿ. ಈ ಪ್ರಕರಣದಿಂದ ನನ್ನ ಸಂಸಾರ ಹಾಳಾಗಿದೆ. ಆಡಿಯೋದಲ್ಲಿ ನಾನು ಯಾವುದೇ ರೀತಿಯಲ್ಲಿ ಅಶ್ಲೀಲ ಪದ ಬಳಸಿಲ್ಲ. ಆಕೆಯನ್ನು ಎಲ್ಲರೂ ಇರುವಾಗಲೇ ಆಫೀಸಿಗೆ ಕರೆಯಿಸಿಕೊಂಡಿದ್ದೆ ಅಷ್ಟೆ. ನಾನಾಗಲಿ, ಆಕೆಯಾಗಲಿ ಅಶ್ಲೀಲವಾಗಿ ಮಾತನಾಡಿಲ್ಲ ಅರುಣ ಕುಮಾರಿಯೊಂದಿಗೆ ಸಂಪರ್ಕವಿಲ್ಲ.

ರಾಕೇಶ್ ಪಾಪಣ್ಣ ಮತ್ತು ಹರ್ಷ ವಿರುದ್ಧ ಹರಿಹಾಯ್ದರಲ್ಲದೆ, ರಾಕೇಶ್ ಪಾಪಣ್ಣ ರೆಸ್ಟೋರೆಂಟ್ ಹೊಂದಿದ್ದು ಒಂದಷ್ಟು ಪೊಲೀಸರಿಗೆ ಪಾರ್ಟಿ ಕೊಟ್ಟು ಪರಿಚಯ ಮಾಡಿಕೊಂಡಿದ್ದು, ಇಡೀ ಪೊಲೀಸರೇ ನನ್ನ ಸಂಪರ್ಕದಲ್ಲಿದ್ದಾರೆ ಎಂಬಂತೆ ಮಾತನಾಡುತ್ತಿದ್ದಾರೆ. ಆಧಾರ್ ಕಾರ್ಡ್ ದರ್ಶನ್ ಕೇಳಿ ಕಳಿಸಿದ್ದೇನೆ. ದರ್ಶನ್ ಅವರು ನನ್ನ ವಿರುದ್ಧ ಆರೋಪ ಮಾಡಿಲ್ಲ. ಹರ್ಷಾ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಯಾವ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ. ಇಲ್ಲದಿರೋದನ್ನು ಇದೆ ಎಂದು ಸೃಷ್ಟಿಸಲು ನನಗೆ ಆಗಲ್ಲ ಆದರೆ ಯಾರೇ ತಪ್ಪು ಮಾಡಿದ್ದರೂ ಅದು ತನಿಖೆಯಿಂದ ಸಾಬೀತಾಗಲಿ.

ಇಷ್ಟಕ್ಕೂ 25 ಕೋಟಿ ರೂ. ಸಣ್ಣ ಮೊತ್ತವಲ್ಲ. ಹಾಗಿರುವಾಗ ಸಿಕ್ಕಿರುವ ಆರೋಪಿ ಅರುಣಾ ಕುಮಾರಿಯನ್ನು ವಿಚಾರಣೆ ಮುಗಿಯುವ ತನಕ ಕಾಯದೆ ಬಿಟ್ಟು ಕಳಿಸಿದ್ದೇಕೆ? ಅಷ್ಟೇ ಅಲ್ಲದೆ ಎಸಿಪಿ ಕಚೇರಿಯಲ್ಲಿ ನನ್ನನ್ನು ಬಿಟ್ಟು ವಿಚಾರಣೆ ಮಾಡಿರುವ ಉದ್ದೇಶವೇನು? ಆಕೆಯನ್ನು ದರ್ಶನ್ ಮನೆಗೆ ಕರೆದುಕೊಂಡು ಹೋಗುತ್ತಾರೆ. ಆಗ ನನ್ನನ್ನು ಯಾಕೆ ಕರೆಯಲಿಲ್ಲ.

ದರ್ಶನ್ ಮೈಸೂರಿಗೆ ಬರಲು ನನಗೆ ಹೇಳಿದ್ದರು. ಬೆಳಗ್ಗೆ 10.30ರ ಬದಲು 11.30ಕ್ಕೆ ಹೋಗಿದ್ದೆ. ಫೋನ್ ಮಾಡಿದರೆ ಎರಡೂವರೆ ಗಂಟೆ ಕಾಲ ದರ್ಶನ್ ಸಿಗಲಿಲ್ಲ. ಈ ಮಧ್ಯೆ ಹೆಬ್ಬಾಳ ಠಾಣೆ ಪೊಲೀಸರು ಕರೆ ಮಾಡಿ ಹರ್ಷಾ ದೂರು ನೀಡಿದ್ದು ವಿಚಾರಣೆಗೆ ಬನ್ನಿ ಎಂದರು. ಆಮೇಲೆ ಎಸಿಪಿ ಒಬ್ಬರು ಮಾತಾಡಿ ಬರುವಂತೆ ಹೇಳಿದರು ಈ ನಡುವೆ ಮಂಡ್ಯ ಬಳಿ ಅರೆಸ್ಟ್ ಮಾಡಿಸೋಣ ಅಂತ ಹೇಳಿದ್ದು ಅದನ್ನು ಹೇಳೋಕೆ ಅವನ್ಯಾರು?

ನನಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ಮಾಡಿ ನನ್ನ ಮೇಲೆ ಆರೋಪ ಸಾಬೀತಾದರೆ ಶಿಕ್ಷೆ ಕೊಡಿ ತಪ್ಪಾಗಿದ್ದರೆ ಅನುಭವಿಸಲು ತಯಾರಿದ್ದೇನೆ. ಆದರೆ ನಾನು ಈ ಘಟನೆಯಿಂದ ಕೆಲಸ ಮುಗಿದ ಮೇಲೆ ಮನೆಗೆ ಬರಬೇಕೆಂಬ ಒಂದು ಬುದ್ಧಿಯನ್ನು ಕಲಿತಿದ್ದೇನೆ. ಮುಖ್ಯವಾಗಿ ಇಲ್ಲಿ ಕೆಲವರು ನನ್ನ ಮತ್ತು ದರ್ಶನ್ ನಡುವೆ ತಂದಿಡುವ ಕೆಲಸ ಮಾಡಿ ತಮಾಷೆ ನೋಡುತ್ತಿದ್ದಾರೆ. ಇಲ್ಲಿ ನೊಂದಿರುವುದು ನಾನು ಮತ್ತು ನನ್ನ ಸಂಸಾರ.

ಸದ್ಯಕ್ಕೆ ಉಮಾಪತಿ ಒಂದಷ್ಟು ವಿಚಾರಗಳನ್ನು ಮಾಧ್ಯಮದವರ ಮುಂದೆ ಬಿಚ್ಚಿಟ್ಟಿದ್ದಾರೆ. ದಿನ ಕಳೆದಂತೆ ಪ್ರಕರಣಕ್ಕೊಂದು ಟ್ವಿಸ್ಟ್ ಸಿಗುತ್ತಲೇ ಇದೆ. ಕೊನೆಗೆ ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದಂತು ಕುತೂಹಲವಾಗಿದೆ.


Spread the love