
ದಶಪಥದಲ್ಲಿ ಶುಲ್ಕ ಸಂಗ್ರಹ ವಿರೋಧಿಸಿ ಪ್ರತಿಭಟನೆ
ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿನ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸದೆ ಟೋಲ್‌ಗಳಲ್ಲಿ ಶುಲ್ಕ ಸಂಗ್ರಹ ಮಾಡುತ್ತಿರುವುದನ್ನು ಖಂಡಿಸಿ ಗುರುವಾರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಡದಿ ಹೋಬಳಿಯ ಹೆಜ್ಜಾಲ(ಕಣಿಮಿಣಕೆ) ಪ್ಲಾಜಾ ಬಳಿ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶಾಸಕ ಎ.ಮಂಜುನಾಥ್ ಸೇರಿದಂತೆ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಜಮಾಯಿಸಿ ಟೋಲ್ ಸಂಗ್ರಹವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಈ ವೇಳೆ ಬಿಜೆಪಿ ಸರ್ಕಾರ ಹಾಗೂ ಹೈವೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಟೋಲ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಿಖಿಲ್ ಕುಮಾರಸ್ವಾಮಿ ಮತ್ತು ಶಾಸಕ ಎ.ಮಂಜುನಾಥ್ ಅವರನ್ನು ಹೊರತುಪಡಿಸಿ ನೂರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಡಿಎಆರ್ ವ್ಯಾನ್‌ಗಳಲ್ಲಿ ಕರೆದೋಯ್ದು ಬಿಡುಗಡೆ ಮಾಡಿದರು. ಸುಮಾರು 2 ಗಂಟೆಗಳ ಕಾಲ ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಭಟನಾ ಧರಣಿ ನಡೆಸಿ ನಂತರ ಪೊಲೀಸ್ ಬಂದನಕ್ಕೆ ಒಳಗಾದರು.
ಇದಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ದಶಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿಯಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯವನ್ನು ಸಹ ಕಲ್ಪಿಸುವುದು ಸಹ ಪ್ರಾಧಿಕಾರದ ಕರ್ತವ್ಯವಾಗಿದೆ. ಆದರೆ ಸರ್ವಿಸ್ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸದೆ ಎಕ್ಸ್‌ಪ್ರೆಸ್ ಹೈವೆಯನ್ನು ಉದ್ಘಾಟಿಸಿ ಜನರಿಂದ ಶುಲ್ಕ ವಸೂಲು ಮಾಡುತ್ತಿರುವುದು ಸರಿಯಲ್ಲ ಎಂಸು ಅಸಮಾಧಾನ ವ್ಯಕ್ತಪಡಿಸಿದರು.
ಎಕ್ಸ್‌ಪ್ರೆಸ್ ಹೈವೆ ಟೋಲ್ ಶುಲ್ಕ ದುಬಾರಿಯಾಗಿದೆ. ಕೇವಲ ೫೫ ಕಿ.ಮೀ ಏಕಮುಖ ಸಂಚಾರಕ್ಕೆ 250 ರೂಗಳನ್ನು ನಿಗದಿ ಮಾಡಲಾಗಿದೆ. ಈ ರಸ್ತೆಯನ್ನು ಶ್ರೀಮಂತರಿಗಾಗಿ ನಿರ್ಮಿಸಲಾಗಿದೆಯೇ? ರಾಮನಗರ ಚನ್ನಪಟ್ಟಣಕ್ಕೆ ಹೋಗುವವರು ಕೂಡ ಈ ದುಬಾರಿ ಶುಲ್ಕವನ್ನು ಕಟ್ಟಬೇಕಾಗಿದೆ. ಹೀಗಾದರೆ ಸ್ಥಳೀಯರು ಮತ್ತು ರೈತರಿಗೆ ಹೆಚ್ಚು ತೊಂದರೆಯಾಗಲಿದೆ. ಅಲ್ಲದೆ ಸರ್ವೀಸ್ ರಸ್ತೆಗಳ ಕಾಮಗಾರಿಯನ್ನು ಮುಗಿಸಿಲ್ಲ. ಹೆದ್ದಾರಿ ಪ್ರಯಾಣಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಅನೇಕ ಅವ್ಯವಸ್ಥೆಗಳ ನಡುವೆ ಶುಲ್ಕ ಸಂಗ್ರಹ ಬೇಕಿತ್ತಾ? ಎಂದು ಪ್ರಶ್ನಿಸಿದರು.
ದಶಪಥ ಹೆದ್ದಾರಿ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಬಸ್ ತಂಗುದಾಣಗಳನ್ನು ಸ್ಥಾಪಿಸಿಲ್ಲ. ಪ್ರಯಾಣಿಕರಿಗೆ ಆಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೆದ್ದಾರಿ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಹೋಟೆಲ್ ಮತ್ತು ವಿಶ್ರಾಂತಿ ಗೃಹ ನಿರ್ಮಿಸಿಲ್ಲ. ಈ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿ ತದನಂತರ ಶುಲ್ಕವನ್ನು ರಿಯಾಯಿತಿ ಧರದಲ್ಲಿ ನಿಗದಿ ಮಾಡಲಿ ಎಂದು ಸಲಹೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷರಾದ ರಾಜಶೇಖರ್(ರಾಮನಗರ), ಜಯಮುತ್ತು(ಚನ್ನಪಟ್ಟಣ), ಮುಖಂಡರಾದ ಬೋರ್‌ವೆಲ್ ರಾಮಚಂದ್ರು, ಸೋಮೇಗೌಡ, ನರಸಿಂಹಮೂರ್ತಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.
collet the toll after completion of project and as per the scientific rate. too much collection is not good for common man.