ದಶಪಥ ಹೆದ್ದಾರಿ ವಾಹನಗಳಿಗೆ ಮತ್ತೇ ಬರೆ!
ರಾಮನಗರ: ಟೋಲ್ ಸಂಗ್ರಹಕ್ಕೆ ಚಾಲನೆ ದೊರೆತು 17 ದಿನಗಳ ಕಳೆಯುವಷ್ಟರಲ್ಲಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತೊಮ್ಮೆ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿ ವಾಹನ ಮಾಲೀಕರಿಗೆ ಬರೆ ಎಳೆದಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಸಂಚಾರಕ್ಕೆ ಏಪ್ರಿಲ್ 1ರಿಂದ ಶೇ.22 ರಷ್ಟು ಟೋಲ್ ದರ ಹೆಚ್ಚಿಸಿದ್ದು, ಪ್ರಯಾಣದ ಶುಲ್ಕ ಮತ್ತಷ್ಟು ದುಬಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಿರುವುದಾಗಿ ಪ್ರಾಧಿಕಾರ ಘೋಷಿಸಿಕೊಂಡಿದೆ. ದಿಢೀರ್ ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲೂಟಿ ಮಾಡುತ್ತಿವೆ ಎಂದು ಕಿಡಿ ಕಾರಿದ್ದಾರೆ.
ಪರಿಷ್ಕೃತ ದರ ಪಟ್ಟಿ: ಕಾರು/ ವ್ಯಾನ್/ ಜೀಪ್ ಏಕಮುಖ ಸಂಚಾರ 165 ರೂ, (30 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 250 ರೂ.(45 ರೂ ಏರಿಕೆ), ಲಘು ವಾಹನಗಳು/ ಮಿನಿ ಬಸ್-270 ರೂ (50 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 405 ರೂ (75 ರೂ ಏರಿಕೆ), ಟ್ರಕ್/ ಬಸ್/ ಎರಡು ಆಕ್ಸೆಲ್ ವಾಹನ- 565 ರೂ(165 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 850 ರೂ(160 ರೂ ಏರಿಕೆ).
ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು- ಏಕಮುಖ ಸಂಚಾರ 615 ರೂ(115 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 925 ರೂ(225 ರೂ ಏರಿಕೆ), ಭಾರಿ ಕಟ್ಟಡ ನಿರ್ಮಾಣ ವಾಹನಗಳು/ ಆರ್ಥ್ ಮೂವರ್ಸ್ /4-6 ಆಕ್ಸೆಲ್ ವಾಹನಗಳು ಏಕಮುಖ ಸಂಚಾರ 885 ರೂ(165 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 1,330 ರೂ,(250 ರೂ ಏರಿಕೆ), 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರ 1,080 ರೂ,(200 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 1,620 ರೂ(305 ರೂ ಏರಿಕೆ)